ADVERTISEMENT

ಬೆಂಗಳೂರು ಅರಮನೆ ಮಾಲೀಕತ್ವ ವಿವಾದ: ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಟಿಡಿಆರ್‌ ಆದೇಶ ಮಾರ್ಪಾಡು ವಿಚಾರ

​ಪ್ರಜಾವಾಣಿ ವಾರ್ತೆ
Published 17 ಮೇ 2022, 19:37 IST
Last Updated 17 ಮೇ 2022, 19:37 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಬೆಂಗಳೂರು ಅರಮನೆ ಮೈದಾನದ ಜಮೀನಿನ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಉತ್ತರಾಧಿಕಾರಿಗೆ ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ಕುರಿತ ತನ್ನ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌ ಹಾಗೂ ಹೃಷಿಕೇಶ್ ರಾಯ್‌ ಅವರಿದ್ದ ನ್ಯಾಯಪೀಠ, ಅರಮನೆ ಮೈದಾನದ ಮಾಲೀಕತ್ವದ ವಿವಾದಕ್ಕೆ ಸಂಬಂಧಿಸಿ 2014ರ ನವೆಂಬರ್ 21ರಂದು ನೀಡಿರುವ ಆದೇಶವನ್ನು ಅನುಸರಿಸುವಂತೆ ಸೂಚಿಸಿತು.

ಅಲ್ಲದೇ, 2014ರ ನವೆಂಬರ್‌ 21ರಂದು ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲನೆ ಮಾಡದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವತ್ತಿನ ಮಾಲೀಕರಾದ ಚದುರಂಗ ಕಾಂತರಾಜ್‌ ಎಂಬುವವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮೂರು ತಿಂಗಳ ನಂತರ ನಡೆಸುವುದಾಗಿ ನ್ಯಾಯಪೀಠ ಹೇಳಿತು.

ADVERTISEMENT

ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್ ಪ್ರಭುಲಿಂಗ ನಾವದಗಿ, ಹಿರಿಯ ವಕೀಲರಾದ ಸಿ.ಎ.ಸುಂದರಮ್ ಹಾಗೂ ವಿ.ಕೃಷ್ಣಮೂರ್ತಿ, ಜಾಗದ ಮಾಲೀಕರಾದ ಚದುರಂಗ ಕಾಂತರಾಜ್‌ ಪರ ವಕೀಲ ಟಿ.ಹರೀಶ್‌ಕುಮಾರ್ ವಾದ ಮಂಡಿಸಿದರು.

ವಿವಾದವೇನು?: ಮೇಖ್ರಿ ವೃತ್ತದಿಂದ ಬಿಡಿಎ ಜಂಕ್ಷನ್‌ ವರೆಗೆ 45 ಮೀಟರ್‌, ಮೇಖ್ರಿ ವೃತ್ತದಿಂದ ಫನ್‌ ವರ್ಲ್ಡ್‌ ವರೆಗೆ 45 ಮೀಟರ್‌ ಹಾಗೂ ಅಲ್ಲಿಂದ ಕಂಟೋನ್ಮೆಂಟ್‌ ವರೆಗೆ 30 ಮೀಟರ್‌ ರಸ್ತೆ ವಿಸ್ತರಿಸಲು ಪಾಲಿಕೆ ಯೋಜಿಸಿದೆ. ಈ ಯೋಜನೆಗೆ ಒಟ್ಟು 15 ಎಕರೆ 39 ಗುಂಟೆ ಜಮೀನು ಅಗತ್ಯವಾಗಿದ್ದು, ಇದಕ್ಕಾಗಿ ಪಾವತಿಸಬೇಕಾದ ಟಿಡಿಆರ್‌ನ ಮೊತ್ತ ₹ 1,396 ಕೋಟಿ ಆಗುತ್ತದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿತ್ತು.

ಬೆಂಗಳೂರು ಅರಮನೆ ಒಳಗೊಂಡಿರುವ ಸಂಪೂರ್ಣ ಆಸ್ತಿಯನ್ನು ರಾಜ್ಯ ಸರ್ಕಾರ 1996ರಲ್ಲಿ ಮಸೂದೆಯನ್ನು ವಿಧಾನಮಂಡಲದ ಉಭಯ ಸದನದಲ್ಲಿ ಅಂಗೀಕರಿಸುವ ಮೂಲಕ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ಮಾರ್ಗಸೂಚಿ ದರದ ಅನ್ವಯ ಪರಿಹಾರವನ್ನೂ ನೀಡಲು ಮುಂದಾಗಿತ್ತು. ಈ ಮೊತ್ತ ಕೇವಲ ₹ 37.28 ಲಕ್ಷದಷ್ಟಿತ್ತು. ಇದನ್ನು ಪ್ರಶ್ನಿಸಿ ರಾಜವಂಶಸ್ಥರು ಹೈಕೋರ್ಟ್‌ ಮೊರೆ ಹೋಗಿದ್ದರು. ಸರ್ಕಾರದ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದರ ವಿರುದ್ಧ ರಾಜವಂಶಸ್ಥರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಸ್ವಾಧೀನ ಮಾಡಿಕೊಂಡಿರುವ ಜಾಗಕ್ಕೆ ನಿಯಮಾವಳಿಗಳ ಪ್ರಕಾರ ಅಭಿವೃದ್ಧಿ ಹಕ್ಕು ಹಸ್ತಾಂತರಿಸಬಹುದು. ಈ ವೇಳೆ ಟಿಡಿಆರ್‌ ನಿಯಮಗಳನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.