ADVERTISEMENT

ರಂಜಾನ್‌: ಚುನಾವಣೆಯ ಸಮಯ ಬದಲಾವಣೆಗೆ ಸುಪ್ರೀಂ ನಕಾರ

ಏಜೆನ್ಸೀಸ್
Published 13 ಮೇ 2019, 14:15 IST
Last Updated 13 ಮೇ 2019, 14:15 IST
   

ನವದೆಹಲಿ: ‘ರಂಜಾನ್‌ ತಿಂಗಳಲ್ಲಿ ಮುಸ್ಲಿಮರು ದಿನವಿಡೀ ಉಪವಾಸವಿರುವುದರಿಂದ ಬಿರು ಬಿಸಿಲಿನಲ್ಲಿ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೆಳಿಗ್ಗೆ 7 ಗಂಟೆಯ ಬದಲಿಗೆ, ನಸುಕಿನ 4.30 ಅಥವಾ 5 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಿಸಬೇಕು’ ಎಂಬ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಮೊಹಮ್ಮದ್‌ ನಿಜಾಮುದ್ದೀನ್‌ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್‌ ಖನ್ನಾ ಅವರನ್ನೊಳಗೊಂಡ ಪೀಠವು, ‘ಚುನಾವಣಾ ಆಯೋಗವು ಈಗಾಗಲೇ ಈ ಅರ್ಜಿಯನ್ನು ಪರಿಶೀಲಿಸಿ, ಸಮಯ ಬದಲಾವಣೆಯಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಎಂದಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಕೋರ್ಟ್‌ ಇಚ್ಛಿಸುವುದಿಲ್ಲ’ ಎಂದಿದೆ.

‘ಉಪವಾಸ ಮಾಡುವವರು ಮಧ್ಯಾಹ್ನದ ವೇಳೆಯಲ್ಲಿ ಮನೆಯಿಂದ ಹೊರಗೆ ಬರುವುದು ಕ್ಷೇಮಕರವಲ್ಲ ಎಂದು ಹವಾಮಾನ ಇಲಾಖೆಯವರು ನೀಡಿರುವ ಸೂಚನೆಯನ್ನು ಉಲ್ಲೇಖಿಸಿದ ಅರ್ಜಿದಾರರು, ಎಲ್ಲರಿಗೂ ಮತದಾನಕ್ಕೆ ಸಮಾನ ಮತ್ತು ಅನುಕೂಲಕರ ಅವಕಾಶ ಲಭಿಸಬೇಕು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂಬುದು ಮಾತ್ರ ನನ್ನ ಉದ್ದೇಶ’ ಎಂದು ವಾದಿಸಿದ್ದರು.

ADVERTISEMENT

ಮೇ 19ರಂದು 7ನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.