ADVERTISEMENT

ಎನ್‌ಡಿಆರ್‌ಎಫ್‌ಗೆ ಹಣ ವರ್ಗಾವಣೆ ಅರ್ಜಿ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್‌

ಪಿಟಿಐ
Published 27 ಜುಲೈ 2020, 10:35 IST
Last Updated 27 ಜುಲೈ 2020, 10:35 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಕೋವಿಡ್‌ ನಿಯಂತ್ರಣಕ್ಕಾಗಿ ಪ್ರಧಾನಿ ಪರಿಹಾರ ನಿಧಿಗೆ ಸಂಗ್ರಹಿಸಿದ ಸಂಪೂರ್ಣ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ (ಎನ್‌ಡಿಆರ್‌ಎಫ್‌) ವರ್ಗಾಯಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ತೀರ್ಪನ್ನು ಸುಪ್ರೀಂಕೋರ್ಟ್ ಸೋಮವಾರ‌ ಕಾಯ್ದಿರಿಸಿದೆ.

‘ಪ್ರಧಾನಿ ಪರಿಹಾರ ನಿಧಿಯು ‘ಸ್ವಯಂಪ್ರೇರಿತ ನಿಧಿ’ಯಾಗಿದೆ. ಆದರೆ, ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ಗೆ ಹಣವನ್ನು ಬಜೆಟ್‌ ವೇಳೆ ಹಂಚಿಕೆ ಮಾಡಲಾಗುತ್ತದೆ’ ಎಂದು ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಅರ್ಜಿದಾರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್‌ ದೇವ್‌, ‘ನಾವು ಯಾರೊಬ್ಬರ ಮೇಲೂ ಅನುಮಾನಿಸುತ್ತಿಲ್ಲ. ಆದರೆ, ಪ್ರಧಾನಿ ಪರಿಹಾರ ನಿಧಿಯ ರಚನೆಯು ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳ ವಿರುದ್ಧವಾಗಿದೆ’ ಎಂದು ದೂರಿದರು.

ADVERTISEMENT

‘ಎನ್‌ಡಿಆರ್‌ಎಫ್‌ನ ಲೆಕ್ಕಪರಿಶೋಧನೆಯನ್ನು ಮಹಾ ಲೆಕ್ಕ ಪರಿಶೋಧಕರು(ಸಿಎಜಿ)‌ ಮಾಡುತ್ತಾರೆ. ಆದರೆ ಪ್ರಧಾನಿ ಪರಿಹಾರ ನಿಧಿಯ ಲೆಕ್ಕಚಾರವನ್ನು ಖಾಸಗಿ ಲೆಕ್ಕ‍ಪರಿಶೋಧಕ‌ ಮಾಡುತ್ತಾರೆ’ ಎಂದು ಅವರು ವಾದ ಮಂಡಿಸಿದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌ ಭೂಷಣ್ ನೇತೃತ್ವದ ಪೀಠ ತೀರ್ಪನ್ನು ಕಾಯ್ದಿರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.