ADVERTISEMENT

ವಿಮಾನ ಟಿಕೆಟ್‌ ರದ್ದು: ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 16:03 IST
Last Updated 25 ಸೆಪ್ಟೆಂಬರ್ 2020, 16:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ ವೇಳೆ ವಿಮಾನ ಹಾರಾಟ ರದ್ದಾದ ಕಾರಣ ಪ್ರಯಾಣಿಕರಿಗೆ ಟಿಕೆಟ್‌ ಹಣ ಮರುಪಾವತಿಯ ವೋಚರ್‌ ನೀಡಬೇಕೆನ್ನುವ ಡಿಜಿಸಿಎ ಸಲಹೆಯನ್ನು ಪರಿಗಣಿಸುವುದಾಗಿ ಹೇಳಿರುವ ಸುಪ್ರೀಂ ಕೋರ್ಟ್, ಹಣ ಮರುಪಾವತಿಗೆ ಸಂಬಂಧಿಸಿದ ತೀರ್ಪನ್ನುಶುಕ್ರವಾರ ಕಾಯ್ದಿರಿಸಿತು.

‘ಪ್ರವಾಸಿ ಲೀಗಲ್‌ ಸೆಲ್‌’ ಎಂಬ ಎನ್‌ಜಿಒ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರ ಪೀಠ ನಡೆಸಿತು.

ಕೇಂದ್ರ ಸರ್ಕಾರ ಮತ್ತುನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಪರ ವಾದ ಮಂಡಿಸಿದಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ , ‘ವರ್ಗಾವಣೆ ಮಾಡಬಹುದಾದ ಟಿಕೆಟ್‌ ವೋಚರ್‌ ಅನ್ನು ಪ್ರಯಾಣಿಕರಿಗೆ ನೀಡಲಾಗುವುದು. ಇದನ್ನು ಟಿಕೆಟ್‌ ಕಾಯ್ದಿರಿಸಿದ ಟ್ರಾವೆಲ್‌ ಏಜೆಂಟ್ ಬಳಸಬಹುದು’ ಎಂದು ಹೇಳಿದರು.

ADVERTISEMENT

‘ಪ್ರಯಾಣಿಕರ ವೋಚರ್‌ಗಳನ್ನು ಟ್ರಾವೆಲ್‌ ಏಜೆಂಟ್‌ ಬಳಸುವುದಾದರೆ, ಇದೊಂದು ಉತ್ತಮ ಸಲಹೆ’ ಎಂದು ಪೀಠ ಹೇಳಿತು. ‌

‘ಮರುಪಾವತಿ ಟಿಕೆಟ್ ವೋಚರ್‌ ಅನ್ನು ಗಡುವಿನೊಳಗೆ ಬಳಸದಿದ್ದರೆ ಹಣವು ಟ್ರಾವೆಲ್‌ ಏಜೆಂಟ್‌ ಖಾತೆಗೆ ಹೋಗಲಿದೆ. ಈ ಟ್ರಾವೆಲ್‌ ಏಜೆಂಟ್‌ಗಳ ಬಗ್ಗೆ ಸರ್ಕಾರಕ್ಕೆ ಗೊತ್ತಿಲ್ಲ. ವಿಮಾನಯಾನ ಸಂಸ್ಥೆಗಳಿಂದ ಇವರು ಟಿಕೆಟ್‌ ಖರೀದಿಸಿರುತ್ತಾರೆ. ಇದು ಅವರ ಮತ್ತು ವಿಮಾನಯಾನ ಸಂಸ್ಥೆಗಳ ಒಪ್ಪಂದವಾಗಿರುತ್ತದೆ. ಪ್ರಯಾಣಿಕರು ಮತ್ತು ಏಜೆಂಟ್‌ಗಳ ಸಂಬಂಧವನ್ನು ನಿಯಂತ್ರಿಸಲಾಗದು. ಆದರೂ, ರದ್ದುಗೊಂಡ ಪ್ರಯಾಣದ ಟಿಕೆಟ್‌ ಮರುಪಾವತಿ ಕುರಿತು ಡಿಜಿಸಿಎ ಗರಿಷ್ಠ ಪ್ರಯತ್ನ ಮಾಡಿದೆ’ ಎಂದು ಮೆಹ್ತಾ ಹೇಳಿದರು.

‘‌ಪ್ರಯಾಣಿಕರು ಟಿಕೆಟ್‌ಗಳನ್ನು ಏಜೆಂಟ್‌ಗೆ ಒಪ್ಪಿಸಬಹುದು. ಅವುಗಳನ್ನು ಏಜೆಂಟ್‌, ಬೇರೆಯವರಿಗೆ ಮರು ಮಾರಾಟ ಮಾಡಬಹುದು. ಆದರೆ, ಎಲ್ಲ ಪ್ರಯಾಣಿಕರಿಗೂ ಹಣ ಪಾವತಿ ಮಾಡುವಂತೆ ಸೂಚಿಸುವುದರಿಂದ ವಿಮಾನಯಾನ ಸಂಸ್ಥೆಗಳಿಗೆ ತೊಂದರೆಯಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.