ADVERTISEMENT

ವನ್ಯಜೀವಿ ಆವಾಸಸ್ಥಾನಗಳಲ್ಲಿ ನಿರ್ಮಾಣ ಕಾಮಗಾರಿಗೆ ಸುಪ್ರೀಂ ಕೋರ್ಟ್ ನಿರ್ಬಂಧ

ಪಿಟಿಐ
Published 8 ಫೆಬ್ರುವರಿ 2023, 14:17 IST
Last Updated 8 ಫೆಬ್ರುವರಿ 2023, 14:17 IST
.
.   

ನವದೆಹಲಿ: ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಯಾವುದೇ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳದಂತೆ ಸುಪ್ರೀಂಕೋರ್ಟ್‌ ಬುಧವಾರ ಅಧಿಕಾರಿಗಳಿಗೆ ಸೂಚಿಸಿದೆ.

ಉತ್ತರಾಖಂಡದ ಕಾರ್ಬೆಟ್‌ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮವಾಗಿ ಕಾಮಗಾರಿ ನಡೆಸಲಾಗುತ್ತಿದೆ, ಹುಲಿ ಸಫಾರಿ ಆರಂಭಿಸಲಾಗುತ್ತಿದೆ ಎಂಬ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮುಂದಿನ ಆದೇಶದವರೆಗೆ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಇದೇ ವೇಳೆ, ಹುಲಿ ಸಂರಕ್ಷಿತ ಪ್ರದೇಶ ಮತ್ತು ರಾಷ್ಟ್ರೀಯ ಉದ್ಯಾನದ ಒಳಗೆ ಮೃಗಾಲಯ ಮತ್ತು ಸಫಾರಿ ಆರಂಭಿಸುವ ಬಗ್ಗೆಯೂ ಕೋರ್ಟ್‌ ಮೆಚ್ಚುಗೆ ವ್ಯಕ್ತಪಡಿಸಿಲ್ಲ.

ADVERTISEMENT

ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ವಿಕ್ರಮ್‌ನಾಥ್‌ ಅವರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠವು, ರಾಷ್ಟ್ರೀಯ ಉದ್ಯಾನಗಳಲ್ಲಿ ಮೃಗಾಲಯ ಮತ್ತು ಸಫಾರಿ ಆರಂಭಿಸುವ ಅಗತ್ಯ ಏನಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ’ವನ್ನು (ಎನ್‌ಟಿಸಿಎ) ಕೇಳಿದೆ.

‘ಸಫಾರಿ ಹಾಗೂ ಮೃಗಾಲಯ ಆರಂಭಿಸುವ ಕುರಿತಾದ ಮಾರ್ಗಸೂಚಿಗಳನ್ನು ಹಿಂಪಡೆಯಿರಿ. ಇಲ್ಲವೇ ಅದಕ್ಕೆ ತಿದ್ದುಪಡಿ ಮಾಡಿ’ ಎಂದು ಸುಪ್ರೀಂ ಕೋರ್ಟ್‌ನಿಂದ ರಚನೆಯಾಗಿದ್ದ ಸೆಂಟ್ರಲ್‌ ಎಂಪವರ್ಡ್‌ ಕಮಿಟಿ (ಸಿಇಸಿ) ಇತ್ತೀಚೆಗೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.