ADVERTISEMENT

ಮಾಧ್ಯಮ ನ್ಯಾಯಮಂಡಳಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

ಪಿಟಿಐ
Published 25 ಜನವರಿ 2021, 14:42 IST
Last Updated 25 ಜನವರಿ 2021, 14:42 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮಾಧ್ಯಮಗಳ ವಿರುದ್ಧ ದಾಖಲಾದ ದೂರುಗಳ ವಿಚಾರಣೆ ನಡೆಸಲು ಮಾಧ್ಯಮ ನ್ಯಾಯಮಂಡಳಿ ಸ್ಥಾಪಿಸುವ ಕುರಿತು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರ, ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಪಿಸಿಐ) ಹಾಗೂ ನ್ಯೂಸ್‌ ಬ್ರಾಡ್‌ಕಾಸ್ಟರ್ಸ್‌ ಅಸೋಸಿಯೇಷನ್‌(ಎನ್‌ಬಿಎ)ನಿಂದ ಸೋಮವಾರ ಪ್ರತಿಕ್ರಿಯೆ ಕೇಳಿದೆ.

‘ಮಾಧ್ಯಮವು, ಅದರಲ್ಲೂ ಪ್ರಮುಖವಾಗಿ ಎಲೆಕ್ಟ್ರಾನಿಕ್‌ ಮಾಧ್ಯಮವು ಲಗಾಮು ಇಲ್ಲದ ಕುದುರೆಯಂತಾಗಿದ್ದು, ಇದನ್ನು ನಿಯಂತ್ರಿಸಬೇಕಾಗಿದೆ’ ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಜೊತೆಗೆ ಮಾಧ್ಯಮ ಉದ್ಯಮ ನಿಬಂಧನೆಗಳ ಕಾನೂನು ಚೌಕಟ್ಟನ್ನು ಪರಿಶೀಲಿಸಲು ಮಾಜಿ ಮುಖ್ಯನ್ಯಾಯಮೂರ್ತಿ ಅಥವಾ ನ್ಯಾಯಮೂರ್ತಿ ನೇತೃತ್ವದ ಸ್ವತಂತ್ರ ಸಮಿತಿಯೊಂದನ್ನು ರಚಿಸಲೂ ಚಿತ್ರ ನಿರ್ಮಾಪಕ ನೀಲೇಶ್‌ ನವಲಖಾ ಹಾಗೂ ಎಂಜಿನಿಯರ್‌ ನಿತಿನ್ ಮೆಮನೆ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ, ವಿ.ರಾಮಸುಬ್ರಹ್ಮಣಿಯನ್‌ ಅವರಿದ್ದ ಪೀಠವು, ನ್ಯೂಸ್‌ ಬ್ರಾಡ್‌ಕಾಸ್ಟರ್ಸ್‌ ಫೆಡರೇಷನ್‌(ಎನ್‌ಬಿಎಫ್‌), ನ್ಯೂಸ್‌ ಬ್ರಾಡ್‌ಕಾಸ್ಟಿಂಗ್‌ ಸ್ಟ್ಯಾಂಡರ್ಡ್ಸ್‌ ಅಥಾರಿಟಿ(ಎನ್‌ಬಿಎಸ್‌ಎ)ಗೂ ನೋಟಿಸ್‌ ನೀಡಿದೆ.

ADVERTISEMENT

‘ಮಾಧ್ಯಮ ಉದ್ಯಮದ ಮೂಲಭೂತ ಹಕ್ಕುಗಳನ್ನು ಕಸಿಯಲು ಈ ಅರ್ಜಿಯನ್ನು ಸಲ್ಲಿಸಲಾಗಿಲ್ಲ. ಬದಲಾಗಿ, ಮಾಧ್ಯಮಗಳಲ್ಲಿ ಬರುತ್ತಿರುವ ಸುಳ್ಳು ಸುದ್ದಿ, ಪ್ರಚೋದಕ ವರದಿಗಳು ಹಾಗೂ ಏಕಾಂತತೆಯ ಹಕ್ಕಿನ ಉಲ್ಲಂಘನೆಗೆ ಹೊಣೆಗಾರರನ್ನಾಗಿಸಲು ಸಲ್ಲಿಸಲಾಗಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.