
ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ 2023ರ ‘ನಾರಿ ಶಕ್ತಿ ವಂದನ ಕಾಯ್ದೆ’ಯನ್ನು ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಪರಿಶೀಲನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದೆ.
ಮಹಿಳೆಯರು ದೇಶದಲ್ಲಿ ಅತಿದೊಡ್ಡ ಅಲ್ಪಸಂಖ್ಯಾತರು ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.
‘ದೇಶದ ಎಲ್ಲಾ ನಾಗರಿಕರು ರಾಜಕೀಯ ಮತ್ತು ಸಾಮಾಜಿಕವಾಗಿ ಸಮಾನತೆಗೆ ಅರ್ಹರು ಎಂದು ಸಂವಿಧಾನದ ಪೀಠಿಕೆ ಹೇಳುತ್ತದೆ. ಈ ದೇಶದಲ್ಲಿ ಅತಿದೊಡ್ಡ ಅಲ್ಪಸಂಖ್ಯಾತರು ಯಾರು? ಒಟ್ಟು ಜನಸಂಖ್ಯೆಯಲ್ಲಿ ಶೇ 48ರಷ್ಟಿರುವ ಮಹಿಳೆಯರು ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಇದು ಮಹಿಳೆಯರ ರಾಜಕೀಯ ಸಮಾನತೆಗೆ ಸಂಬಂಧಿಸಿದ ವಿಷಯ’ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
ಅರ್ಜಿದಾರರಾದ ಜಯಾ ಠಾಕೂರ್ ಪರ ಹಾಜರಾದ ಹಿರಿಯ ವಕೀಲೆ ಶೋಭಾ ಗುಪ್ತಾ, ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಮಹಿಳೆಯರು ತಮ್ಮ ಪ್ರಾತಿನಿಧ್ಯಕ್ಕಾಗಿ ನ್ಯಾಯಾಲಯದ ಮೊರೆಹೋಗಬೇಕಾಗಿರುವುದು ದುರದೃಷ್ಟಕರ’ ಎಂದರು.
ದತ್ತಾಂಶಗಳ ಆಧಾರದ ಮೇಲೆ ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಲ್ಲಿನ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಅವರು ವಾದಿಸಿದರು.
ಕಾನೂನನ್ನು ಜಾರಿಗೊಳಿಸುವುದು ಕಾರ್ಯಾಂಗದ ವಿಶೇಷಾಧಿಕಾರವಾಗಿದ್ದು, ಈ ವಿಷಯಲ್ಲಿ ಯಾವುದೇ ಆದೇಶ ಹೊರಡಿಸಲಾಗುವುದಿಲ್ಲ ಎಂದು ಪೀಠ ಹೇಳಿತು. ‘ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸುವಾಗ ನ್ಯಾಯಾಲಯಗಳಿಗೆ ಇತಿಮಿತಿಗಳಿವೆ’ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
‘ನಾರಿ ಶಕ್ತಿ ವಂದನ ಮಸೂದೆ’ಗೆ 2023ರ ಸೆಪ್ಟೆಂಬರ್ 21ರಂದು ಸಂಸತ್ತಿನ ಅಂಗೀಕಾರ ಲಭಿಸಿತ್ತು. ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಬಹುತೇಕ ಸರ್ವಾನುಮತದಿಂದ ಹಾಗೂ ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. 2023ರ ಸೆಪ್ಟೆಂಬರ್ 28ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗೆ ಒಪ್ಪಿಗೆ ನೀಡಿದ್ದರು. ಈ ಕಾಯ್ದೆಯು ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಶೇಕಡ 33ರಷ್ಟನ್ನು ಮಹಿಳೆಯರಿಗೆ ಮೀಸಲಾಗಿ ಇರಿಸುತ್ತದೆ.
ಲೋಕಸಭೆಗೆ 2029ರಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಈ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇಲ್ಲ. ಕಾಯ್ದೆಯು ಜಾರಿಗೆ ಬರಬೇಕು ಎಂದಾದರೆ ಕ್ಷೇತ್ರಗಳ ಪುನರ್ ವಿಂಗಡಣೆ ಆಗಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಪುನರ್ ವಿಂಗಡಣೆಗೆ ಕಾಯದೆಯೇ ಕಾಯ್ದೆ ಜಾರಿಗೊಳಿಸಬೇಕು ಎಂದು ಜಯಾ ಠಾಕೂರ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.