ADVERTISEMENT

ಪರಿಸರ ನಿಯಂತ್ರಣ ವ್ಯವಸ್ಥೆ ಸ್ಥಾಪನೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ‘

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 16:07 IST
Last Updated 9 ಮಾರ್ಚ್ 2021, 16:07 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಪರಿಸರ ಅನುಮತಿ ನೀಡಲು ಸ್ವತಂತ್ರ ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸದೇ ಇರುವುದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ, ವಿ.ರಾಮಸುಬ್ರಮಣಿಯನ್‌ ಅವರಿರುವ ನ್ಯಾಯಪೀಠ ಈ ಸಂಬಂಧ ಹಿರಿಯ ವಕೀಲ ಪ್ರಶಾಂತಭೂಷಣ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿತು.

2011ರಲ್ಲಿ ಲಫಾರ್ಜ್‌ ಕಂಪನಿ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಪರಿಸರ ಅನುಮತಿ ನೀಡುವುದರ ಮೇಲ್ವಿಚಾರಣೆಗಾಗಿ ರಾಷ್ಟ್ರೀಯ ಪರಿಸರ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುವಂತೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು ದೂರಿ ಪ್ರಶಾಂತಭೂಷಣ್‌ ಅವರು ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಪ್ರಧಾನಿ ಅಧ್ಯಕ್ಷರಾಗಿರುವ ನ್ಯಾಷನಲ್‌ ಬೋರ್ಡ್‌ ಫಾರ್ ವೈಲ್ಡ್‌ಲೈಫ್‌ನ (ಎನ್‌ಬಿಡಬ್ಲ್ಯುಎಲ್‌) ಸಭೆ ಕಳೆದ ಆರು ವರ್ಷಗಳಿಂದ ನಡೆದಿಲ್ಲ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸ್ಥಾಪಿಸಲಾಗಿರುವ ಸಲಹಾ ಸಮಿತಿ.

ರಾಷ್ಟ್ರೀಯ ಉದ್ಯಾನಗಳು ಹಾಗೂ ಪಕ್ಷಿಧಾಮಗಳ ಸಮೀಪ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಮತಿ ನೀಡುವ ಮುನ್ನ ವನ್ಯಜೀವಿಗಳಿಗೆ ಸಂಬಂಧಿಸಿದ ವಿಷಯಗಳ ಪರಿಶೀಲನೆ ನಡೆಸುವುದು ಎನ್‌ಬಿಡಬ್ಲ್ಯುಎಲ್‌ ಜವಾಬ್ದಾರಿ ಎಂಬ ಅಂಶವನ್ನು ಸಹ ಕೋರ್ಟ್‌ ಗಮನಕ್ಕೆ ತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.