ADVERTISEMENT

ನಿಂದನೆ ಪ್ರಕರಣ: ವಿವರವಾದ ಪ್ರತಿಕ್ರಿಯೆಗಾಗಿ ಪ್ರಶಾಂತ ಭೂಷಣ್‌ಗೆ ಸುಪ್ರೀಂ ನೊಟೀಸ್

ಏಜೆನ್ಸೀಸ್
Published 22 ಜುಲೈ 2020, 8:15 IST
Last Updated 22 ಜುಲೈ 2020, 8:15 IST
ಹಿರಿಯ ವಕೀಲ ಪ್ರಶಾಂತ ಭೂಷಣ್
ಹಿರಿಯ ವಕೀಲ ಪ್ರಶಾಂತ ಭೂಷಣ್   

ನವದೆಹಲಿ: ಕಟುವಾದ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಹಿರಿಯ ವಕೀಲ ಪ್ರಶಾಂತ ಭೂಷಣ್‌ ಹಾಗೂ ಟ್ವಿಟರ್‌ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್‌ ನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರಿಂಕೋರ್ಟ್‌ ಇದೀಗ ಭೂಷಣ್ ಅವರಿಗೆ ಬುಧವಾರ ನೊಟೀಸ್ ನೀಡಿದ್ದು, ತಮ್ಮ ಟ್ವೀಟ್‌ಗಳ ಕುರಿತು ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಳಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಟ್ವಿಟರ್ ಇಂಡಿಯಾವನ್ನು ಈ ಪ್ರಕರಣದಲ್ಲಿ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಳಿದೆ ಮತ್ತು ಹೆಚ್ಚಿನ ವಿಚಾರಣೆಗೆ ಆಗಸ್ಟ್ 5 ರಂದು ಪ್ರಕರಣವನ್ನು ನಿಗದಿಪಡಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವಂತೆ ಸುಪ್ರೀಂಕೋರ್ಟ್ ಅಟಾರ್ನಿ ಜನರಲ್ ಅವರನ್ನು ಕೇಳಿದೆ.

ಟ್ವಿಟರ್ ಇಂಡಿಯಾ ಪರ ಹಾಜರಾಗಿದ್ದ ಹಿರಿಯ ವಕೀಲ ಸಜ್ಜನ್ ಪೂವಯ್ಯ, ಟ್ವಿಟರ್ ಐಎನ್‌ಸಿ ಸರಿಯಾಗಿ ಕಾರ್ಯನಿರ್ವಹಿಸಿದ್ದು, ಈ ಪ್ರಕರಣದಲ್ಲಿ ಅದನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದರು. ನ್ಯಾಯಾಲಯದ ಆದೇಶದ ನಂತರ ನಾವು ಟ್ವೀಟ್ ಅನ್ನು ನಿಷ್ಕ್ರಿಯಗೊಳಿಸಬಹುದು ಎಂದು ಪೂವಯ್ಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ADVERTISEMENT

ಸುಪ್ರೀಂ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಕ್ರಿಮಿನಲ್‌ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ. ಜೂನ್ 27ರಂದು ಟ್ವೀಟ್ ಮಾಡಿದ್ದ ಭೂಷಣ್, ಕಳೆದ ಆರು ವರ್ಷಗಳಲ್ಲಿ 'ಭಾರತದ ಪ್ರಜಾಪ್ರಭುತ್ವದ ನಾಶ'ದಲ್ಲಿ ಸುಪ್ರೀಂ ಕೋರ್ಟ್ ಪಾತ್ರ ಕೂಡ ಇದೆ ಎಂದು ಆರೋಪಿಸಿದ್ದರು.

ಎಂ.ನಾಗೇಶ್ವರರಾವ್‌ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಕ್ಕೆ ಸಂಬಂಧಿಸಿ ಪ್ರಶಾಂತ ಭೂಷಣ್‌ ಅವರು 2019ರಲ್ಲಿ ಟ್ವೀಟ್‌ ಮಾಡಿದ್ದರು. ಈ ಸಂಬಂಧ ಆಗಿನ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ಭೂಷಣ್‌ ವಿರುದ್ಧ ನಿಂದನಾ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಕ್ಕಾಗಿ ಸಹ ಭೂಷಣ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.