ADVERTISEMENT

ಕಬ್ಬು ಪೂರೈಸಿದ 14 ದಿನಗಳ ಒಳಗೆ ಬಾಕಿ ಪಾವತಿ ಕೋರಿ ಪಿಐಎಲ್‌

ಕೇಂದ್ರ, 11 ರಾಜ್ಯಗಳಿಗೆ ‘ಸುಪ್ರೀಂ’ ನೋಟಿಸ್‌: ಪ್ರತಿಕ್ರಿಯೆ ಸಲ್ಲಿಸಲು ಸೂಚನೆ

ಪಿಟಿಐ
Published 4 ಆಗಸ್ಟ್ 2021, 11:14 IST
Last Updated 4 ಆಗಸ್ಟ್ 2021, 11:14 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ 14 ದಿನಗಳ ಒಳಗಾಗಿ ರೈತರಿಗೆ ಬಾಕಿ ಹಣ ಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಕಬ್ಬು ಬೆಳೆಯುವ 11 ರಾಜ್ಯಗಳಿಗೆ ಸುಪ್ರೀಂಕೋರ್ಟ್ ಬುಧವಾರ ನೋಟಿಸ್‌ ಜಾರಿ ಮಾಡಿತು.

ಮಹಾರಾಷ್ಟ್ರದ ಮಾಜಿ ಸಂಸದ ರಾಜು ಅಣ್ಣಾ ಶೆಟ್ಟಿ ಪರ ಹಿರಿಯ ವಕೀಲ ಆನಂದ್‌ ಗ್ರೋವರ್ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿ ಸೂರ್ಯಕಾಂತ್ ಅವರಿರುವ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿತು.

‘ಬೆಳೆಗಾರರು ಪೂರೈಕೆ ಮಾಡಿದ ಕಬ್ಬು ಕಾರ್ಖಾನೆಗಳಿಗೆ ತಲುಪಿದ 14 ದಿನಗಳ ಒಳಗಾಗಿ ರೈತರಿಗೆ ಬಾಕಿ ಹಣವನ್ನು ಪಾವತಿಸಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ಈ ಹಿಂದೆ ನೀಡಿರುವ ತನ್ನ ತೀರ್ಪಿನಲ್ಲಿ ಹೇಳಿದೆ. ಹೀಗಾಗಿ, ಬಾಕಿ ಹಣ ಪಾವತಿಗೆ ವ್ಯವಸ್ಥೆಯೊಂದನ್ನು ಜಾರಿಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ADVERTISEMENT

‘ಹಲವು ರಾಜ್ಯಗಳು ರೈತರಿಗೆ ಭಾರಿ ಮೊತ್ತದ ಬಾಕಿ ಉಳಿಸಿಕೊಂಡಿವೆ’ ಎಂದೂ ವಕೀಲ ಗ್ರೋವರ್‌ ಅವರು ನ್ಯಾಯಪೀಠದ ಗಮನಕ್ಕೆ ತಂದರು.

ಕೇಂದ್ರ ಹಾಗೂ ಕರ್ನಾಟಕ ಸೇರಿದಂತೆ 11 ರಾಜ್ಯಗಳಿಗೆ ನೋಟಿಸ್‌ ಜಾರಿ ಮಾಡಲು ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಮೂರು ವಾರಗಳ ನಂತರ ಕೈಗೆತ್ತಿಕೊಳ್ಳುವುದಾಗಿ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.