ADVERTISEMENT

ವಕೀಲರ ಉಪಸ್ಥಿತಿ ಕೋರಿ ಪಿಐಎಲ್‌: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್‌ 

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 16:29 IST
Last Updated 15 ಅಕ್ಟೋಬರ್ 2025, 16:29 IST
...
...   

ನವದೆಹಲಿ: ಯಾವುದೇ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆತನ ಪರ ವಕೀಲರೂ ಜತೆಗಿರಲು ಅವಕಾಶ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್‌) ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರ್ಕಾರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ. 

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿ ಕೆ.ವಿನೋದ್‌ ಚಂದ್ರನ್‌ ಅವರನ್ನೊಳಗೊಂಡ ಪೀಠವು, ಇದಕ್ಕೆ ಸಂಬಂಧಿಸಿದ ನೋಟಿಸ್‌ ನೀಡಿದೆ. 

ಪೊಲೀಸರು ಅಥವಾ ತನಿಖಾ ಸಂಸ್ಥೆಗಳಿಂದ ವಿಚಾರಣೆಗೆ ಒಳಗಾಗುವ ವ್ಯಕ್ತಿಯು ತನ್ನ ಜತೆಗೆ ವಕೀಲರ ಉಪಸ್ಥಿತಿಯನ್ನು ಹೊಂದುವ ಮೂಲಭೂತ ಹಕ್ಕನ್ನು ಹೊಂದಿರುತ್ತಾನೆ. ಹೀಗಾಗಿ ಈ ಹಕ್ಕನ್ನು ಸಂವಿಧಾನದ 20(3), 21 ಹಾಗೂ 22ನೇ ವಿಧಿಗಳ ಅಡಿಯಲ್ಲಿ ದೊರೆಯುವ ಸಾಂವಿಧಾನಿಕ ಖಾತರಿ ಎಂದು ಪರಿಗಣಿಸುವಂತೆ ಕೋರಿ ವಕೀಲ ಶಫಿ ಮಾಥರ್‌ ಎಂಬವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಮಾಥರ್‌ ಪರವಾಗಿ ಹಿರಿಯ ವಕೀಲೆ ಮನೇಕಾ ಗುರುಸ್ವಾಮಿ ಅವರು ನ್ಯಾಯಾಲಯಕ್ಕೆ ಹಾಜರಾಗಿ ಅರ್ಜಿ ಪರಿಗಣಿಸಲು ಮನವಿ ಸಲ್ಲಿಸಿದ್ದಾರೆ.

ಕಾನೂನು ಖಾತರಿಗಾಗಿ ಅರ್ಜಿ: 

ಪೊಲೀಸ್‌ ವಶದಲ್ಲಿರುವಾಗ ಎದುರಾಗುವ ಕಿರುಕುಳಕ್ಕೆ ಸಂಬಂಧಿಸಿದಂತೆ ‘ಇಂಡಿಯಾ– 2019ರ ಕಿರುಕುಳಕ್ಕೆ ಸಂಬಂಧಿಸಿದ ವಾರ್ಷಿಕ ವರದಿ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಈ ಅರ್ಜಿ ಸಲ್ಲಿಸಿರುವುದಾಗಿ ವಕೀಲೆ ಮನೇಕಾ ಹೇಳಿದ್ದಾರೆ. 

ಅಲ್ಲದೇ, ವಿಚಾರಣೆಗೆ ಒಳಗಾದ ವ್ಯಕ್ತಿಗೆ ಕೇಳಲಾಗುವ ಪ್ರಶ್ನೆಗಳು ಉದ್ದೇಶಪೂರ್ವಕ ದೋಷಾರೋಪಣೆ ಮಾಡುವಂಥವೇ ಎಂಬುದನ್ನು ಗಮನಿಸಲು ಕಾನೂನು ಸಲಹೆಗಾರರು ಜತೆಗಿರುವ ಅಗತ್ಯವಿದೆ ಎಂದೂ ಪ್ರತಿಪಾದಿಸಿರುವ ಅವರು, ವಿಚಾರಣೆ ಸಂದರ್ಭದಲ್ಲಿ ಕಾನೂನು ಖಾತರಿಯನ್ನು ದೃಢಪಡಿಸಿಕೊಳ್ಳಲು ವಕೀಲರ ಉಪಸ್ಥಿತಿ ಅಗತ್ಯ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.