ADVERTISEMENT

ಮಧ್ಯಪ್ರದೇಶ: ಇಂದೇ ವಿಶ್ವಾಸಮತ

ಒಂದೇ ಕಾರ್ಯಸೂಚಿ, ಕಲಾಪ ಚಿತ್ರೀಕರಿಸಿ: ‘ಸುಪ್ರೀಂ’ ತಾಕೀತು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 19:45 IST
Last Updated 19 ಮಾರ್ಚ್ 2020, 19:45 IST
ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರ ಮನವೊಲಿಸಲು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಯತ್ನ
ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರ ಮನವೊಲಿಸಲು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಯತ್ನ   

ನವದೆಹಲಿ: ‘ಮಧ್ಯಪ್ರದೇಶ ವಿಧಾನಸಭೆ ವಿಶೇಷ ಅಧಿವೇಶನವನ್ನು ಶುಕ್ರವಾರವೇ ಕರೆದು ವಿಶ್ವಾಸಮತ ಸಾಬೀತು ಪ್ರಕ್ರಿಯೆಯನ್ನು ಸಂಜೆ 5ಗಂಟೆ ಒಳಗೆ ಪೂರ್ಣಗೊಳಿಸಬೇಕು’ ಎಂದು ಸುಪ್ರೀ ಕೋರ್ಟ್‌ ಅಲ್ಲಿನ ಸ್ಪೀಕರ್‌ಗೆ ಆದೇಶಿಸಿತು.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಸ್ಪೀಕರ್ ಎನ್.ಪಿ.ಪ್ರಜಾಪತಿ ಅವರಿಗೆ ಈ ನಿರ್ದೇಶನ ನೀಡಿದ್ದು, ವಿಶ್ವಾಸಮತ ಕೋರುವ ಇಡೀ ಕಲಾಪದ ವಿಡಿಯೊ ಚಿತ್ರೀಕರಣ ಮಾಡಿಸಬೇಕು ಎಂದು ತಿಳಿಸಿತು.

ಅಲ್ಲದೆ, ಮುಖ್ಯಮಂತ್ರಿವಿಶ್ವಾಸಮತ ಕೋರುವ ಸಂದರ್ಭದಲ್ಲಿ 16 ಬಂಡಾಯ ಶಾಸಕರು ಸದನಕ್ಕೆ ಬರಲು ಬಯಸಿದರೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳ ಪೊಲೀಸ್‌ ವರಿಷ್ಠರಿಗೂ ನ್ಯಾಯಪೀಠ ಆದೇಶಿಸಿತು.

ADVERTISEMENT

ವಿಶೇಷ ಅಧಿವೇಶನದ ಕಾರ್ಯಸೂಚಿ ವಿಶ್ವಾಸಮತ ಕೋರುವುದಷ್ಟೇ ಆಗಿರಬೇಕು. ಕಲಾಪಕ್ಕೆ ಯಾರೂ ಅಡ್ಡಿಪಡಿಸಬಾರದು. ಕಾನೂನು ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು ಎಂದು ವಿಧಾನಸಭೆ ಕಾರ್ಯದರ್ಶಿ ಅವರಿಗೆ ಸೂಚಿಸಿತು.

ವಿಡಿಯೊ ಸಂವಾದಕ್ಕೆ ಸೂಚನೆ: ಇದಕ್ಕೂ ಮುನ್ನ ಬೆಳಿಗ್ಗೆ ವಿಚಾರಣೆ ವೇಳೆ ನ್ಯಾಯಪೀಠವು ‘ಬಂಡಾಯ ಶಾಸಕರ ಜೊತೆ ವಿಡಿಯೊ ಸಂವಾದ ನಡೆಸಬೇಕು’ ಎಂದು ಸ್ಪೀಕರ್‌ಗೆ ಸಲಹೆ ಮಾಡಿತು..ಈ ಸಲಹೆಗೆ ಸ್ಪೀಕರ್‌ ಅಸಮ್ಮತಿ ಸೂಚಿಸಿದ್ದರು.

‘ವಿಡಿಯೊ ಚರ್ಚೆಗೆ ನೆರವಾಗಲು ಪೀಠವು ಬೆಂಗಳೂರು ಅಥವಾ ಇತರೆ ಸ್ಥಳಕ್ಕೆವೀಕ್ಷಕರನ್ನು ನಿಯೋಜಿಸಲಾಗುವುದು. ಈ ಮೂಲಕ ಶಾಸಕರ ಜೊತೆ ಚರ್ಚಿಸಿಸ್ಪೀಕರ್‌ ತೀರ್ಮಾನಿಸಬಹುದು’ ಎಂದು ಹೇಳಿತು.

ಅಲ್ಲದೆ, ‘ಬಂಡಾಯ ಶಾಸಕರು ನೀಡಿರುವ ರಾಜೀನಾಮೆ ಪತ್ರ ಕುರಿತಂತೆ ಯಾವುದಾದರೂ ವಿಚಾರಣೆ ನಡೆಸಲಾಗಿದೆಯೇ ಹಾಗೂ ಯಾವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ನ್ಯಾಯಪೀಠವು ಸ್ಪೀಕರ್‌ಗೆ ಪ್ರಶ್ನಿಸಿತು.

ಸ್ಪೀಕರ್‌ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ.ಸಿಂಘ್ವಿ ಅವರು, ‘ಕೋರ್ಟ್‌ ಹೀಗೆ ಕಾಲಮಿತಿಯ ನಿರ್ದೇಶನವನ್ನು ಸ್ಪೀಕರ್‌ಗೆ ನೀಡಲು ಆರಂಭಿಸಿದರೆ, ಸಾಂವಿಧಾನಿಕವಾಗಿ ಸಮಸ್ಯೆಯಾಗಲಿದೆ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.