ADVERTISEMENT

ನಾಯಿ ಕಡಿತ, ರೇಬಿಸ್‌ನಿಂದ ಸಾವು ಪ್ರಕರಣ: ‘ಸುಪ್ರೀಂ’ ಸ್ವಯಂಪ್ರೇರಿತ ವಿಚಾರಣೆ

ಪಿಟಿಐ
Published 28 ಜುಲೈ 2025, 15:55 IST
Last Updated 28 ಜುಲೈ 2025, 15:55 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ನಾಯಿ ಕಡಿತ ಮತ್ತು ರೇಬಿಸ್‌ನಿಂದ ಸಾವಿಗೀಡಾಗುವ ಪ್ರಕರಣಗಳ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸಲು ಸೋಮವಾರ ನಿರ್ಧರಿಸಿದೆ.

ಆರು ವರ್ಷದ ಬಾಲಕಿಯೊಬ್ಬಳು ರೇಬಿಸ್‌ನಿಂದ ಮೃತಪಟ್ಟಿರುವುದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಯನ್ನು ಗಮನದಲ್ಲಿಟ್ಟುಕೊಂಡು, ಸುಪ್ರೀಂ ಕೋರ್ಟ್‌ ಈ ಹೆಜ್ಜೆಯಿಟ್ಟಿದೆ.

ಮಾಧ್ಯಮ ವರದಿಯು ‘ತುಂಬಾ ಚಿಂತೆಗೀಡುಮಾಡುವಂತಹದ್ದು ಮತ್ತು ಆತಂಕಕಾರಿ’ ಎಂದು ಬಣ್ಣಿಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠ, ‘ನವದೆಹಲಿ ಹಾಗೂ ನಗರದ ಹೊರವಲಯಗಳಲ್ಲಿ ಪ್ರತಿದಿನ ನೂರಾರು ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ. ಇದು ಅಂತಿಮವಾಗಿ ರೇಬೀಸ್‌ಗೆ ಕಾರಣವಾಗುತ್ತದೆ. ಮಕ್ಕಳು ಮತ್ತು ವೃದ್ಧರು ಈ ಭಯಾನಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ’ ಎಂದು ಹೇಳಿತು. 
     
‘ಈ ಬಗ್ಗೆ ನಾವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ವಿಚಾರಣೆ ನಡೆಸುತ್ತೇವೆ’ ಎಂದು ಪೀಠ ಹೇಳಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಈ ವಿಷಯವನ್ನು ಸ್ವಯಂಪ್ರೇರಿತ ಅರ್ಜಿಯಾಗಿ ನೋಂದಾಯಿಸಲು ಪೀಠವು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿತು.
     
‘ಮುಂದಿನ ಕ್ರಮಕ್ಕಾಗಿ ಈ ಆದೇಶವನ್ನು ಮಾಧ್ಯಮ ವರದಿಯ ಪ್ರತಿಯ ಜತೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡಲಿ’ ಎಂದು ಪೀಠವು ಹೇಳಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.