ADVERTISEMENT

ಅತೀಕ್ ಮಕ್ಕಳ ಬಿಡುಗಡೆ: ಪರಿಶೀಲಿಸಲು ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 16:15 IST
Last Updated 3 ಅಕ್ಟೋಬರ್ 2023, 16:15 IST
   

ನವದೆಹಲಿ: ‘ಹತ್ಯೆಗೀಡಾದ ಗ್ಯಾಂಗ್‌ಸ್ಟರ್ ಅತೀಕ್‌ ಅಹ್ಮದ್ ಅವರ ಇಬ್ಬರು ಮಕ್ಕಳು, ಮಕ್ಕಳ ಆರೈಕೆ ಕೇಂದ್ರದಲ್ಲಿರಲು ಬಯಸುತ್ತಿಲ್ಲ ಎಂಬ ಕಾರಣದಿಂದ ಅವರ ಬಿಡುಗಡೆಗೆ ಪರಿಶೀಲಿಸಬೇಕು’ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಮಕ್ಕಳ ಕಲ್ಯಾಣ ಸಮಿತಿಯು ಈ ವಿಷಯವನ್ನು ಪರಿಶೀಲಿಸಿ ಒಂದು ವಾರದಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚಿಸಿರುವ ನ್ಯಾಯಪೀಠವು, ವಿಚಾರಣೆಯನ್ನು ಅಕ್ಟೋಬರ್‌ 10ಕ್ಕೆ ಮುಂದೂಡಿತು.

ನ್ಯಾಯಮೂರ್ತಿಗಳಾದ ಎಸ್‌.ರವೀಂದ್ರ ಭಟ್, ಅರವಿಂದ ಕುಮಾರ್‌ ಅವರಿದ್ದ ಪೀಠವು, ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಮಾಜಿ ಜಂಟಿ ನಿರ್ದೇಶಕ ಡಾ.ಕೆ.ಸಿ.ಜಾರ್ಜ್ ಸಲ್ಲಿಸಿದ್ದ ವರದಿಯನ್ನು ಪರಿಗಣಿಸಿತು. ಪ್ರಯಾಗ್‌ರಾಜ್‌ನಲ್ಲಿರುವ ಮಕ್ಕಳ ಆರೈಕೆ ಕೇಂದ್ರದಲ್ಲಿರುವ ಮಕ್ಕಳ ಜೊತೆಗೆ ಆಗಸ್ಟ್ 28ರಂದು ಸಮಾಲೋಚನೆ ನಡೆಸಿದ್ದ ಜಾರ್ಜ್ ಅವರು ಕೋರ್ಟ್‌ಗೆ ವರದಿ ಸಲ್ಲಿಸಿದ್ದರು.

ADVERTISEMENT

17 ಮತ್ತು 15 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕು ಎಂದು ಕೋರಿ ಅತೀಕ್‌ ಅಹ್ಮದ್‌ ಅವರ ಸಹೋದರಿ ಶಾಹೀನ್ ಅಹ್ಮದ್ ಅರ್ಜಿ ಸಲ್ಲಿಸಿದ್ದರು. ಆದರೆ, ಮಕ್ಕಳ ತಾಯಿ ಶಾಹಿಸ್ತಾ ಪರ್ವೀನ್‌ ಬದುಕಿದ್ದಾರೆ ಎಂಬ ಹಿನ್ನೆಲೆಯಲ್ಲಿ ಈ ಮನವಿಯನ್ನು ಈ ಮೊದಲು ಅಲಹಾಬಾದ್‌ ಹೈಕೋರ್ಟ್ ತಳ್ಳಿಹಾಕಿತ್ತು.

ಪತಿ ಹತ್ಯೆಯ ನಂತರ ಶಾಹಿಸ್ತಾ ಅವರು ತಲೆಮರೆಸಿಕೊಂಡಿದ್ದಾರೆ. ಫುಲ್‌ಪುರ ಕ್ಷೇತ್ರದ ಮಾಜಿ ಸಂಸದ ಅತೀಕ್‌, ಅವರ ತಮ್ಮ ಮಾಜಿ ಶಾಸಕ ಅಶ್ರಫ್‌ರನ್ನು ಪೊಲೀಸ್‌ ವಶದಲ್ಲಿದ್ದಂತೆಯೇ ಏ.15ರಂದು ವೈದ್ಯಕೀಯ ತಪಾಸಣೆಗೆ ಒಯ್ಯುವಾಗ ಹತ್ಯೆಯಾಗಿತ್ತು. ಅತೀಕ್ ಪುತ್ರ ಅಸದ್‌ನನ್ನು ಝಾನ್ಸಿಯಲ್ಲಿ ಏ.13ರಂದು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.