ADVERTISEMENT

ದೇಶಭ್ರಷ್ಟ ಉದ್ಯಮಿ ವಿಜಯ್‌ ಮಲ್ಯ ಹಣ ಠೇವಣಿ ಇರಿಸಿಲ್ಲ: ‘ಸುಪ್ರೀಂ’ಗೆ ವರದಿ

ಪಿಟಿಐ
Published 4 ಸೆಪ್ಟೆಂಬರ್ 2022, 14:14 IST
Last Updated 4 ಸೆಪ್ಟೆಂಬರ್ 2022, 14:14 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಹಣ ವರ್ಗಾವಣೆ ಪ್ರಕರಣದಲ್ಲಿ ದೇಶಭ್ರಷ್ಟ ಉದ್ಯಮಿ ವಿಜಯ್‌ ಮಲ್ಯ ಮತ್ತು ಇತರ ಫಲಾನುಭವಿಗಳು ಆಗಸ್ಟ್‌ 18ರ ವರೆಗೆ ಯಾವುದೇ ಮೊತ್ತವನ್ನು ಠೇವಣಿ ಇರಿಸಿಲ್ಲ ಎಂದು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧಿಕರಣದ ವಸೂಲಾತಿ ಅಧಿಕಾರಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ.

ಮಲ್ಯ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಜುಲೈ 11 ರಂದು ಸುಪ್ರೀಂ ಕೋರ್ಟ್ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ₹318 ಕೋಟಿ ಮೊತ್ತದ ವಹಿವಾಟಿನ ಅಡಿಯಲ್ಲಿ ಪಡೆದಿರುವ ಮೊತ್ತವನ್ನು ಶೇ 8ರ ಬಡ್ಡಿಯೊಂದಿಗೆ ವಸೂಲಾತಿ ಅಧಿಕಾರಿ ಬಳಿ ಠೇವಣಿ ಇಡಬೇಕು ಎಂದೂ ಸೂಚಿಸಿತ್ತು.

ವಿಜಯ್‌ ಮಲ್ಯ ಮತ್ತು ಇತರರ ವಿರುದ್ಧ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ನೇತೃತ್ವದಲ್ಲಿ ಬ್ಯಾಂಕ್‌ಗಳ ಒಕ್ಕೂಟವು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌ ಮತ್ತು ನ್ಯಾಯಮೂರ್ತಿ ಎಸ್‌. ರವೀಂದ್ರ ಭಟ್‌ ಅವರನ್ನೊಳಗೊಂಡ ನ್ಯಾಯಪೀಠವು ಸೋಮವಾರ ವಿಚಾರಣೆಗಾಗಿ ಪರಿಗಣಿಸಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯವು ಸಲ್ಲಿಸಿರುವ ಪತ್ರವನ್ನೂ ನ್ಯಾಯಾಲಯ ಪರಿಗಣಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.