ADVERTISEMENT

ಚುನಾವಣಾ ಆಯುಕ್ತರ ನೇಮಕ: ಇಂದು ಸುಪ್ರೀಂ ಕೋರ್ಟ್‌ ವಿಚಾರಣೆ

ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆ ಎಡಿಆರ್‌, ಇತರರಿಂದ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
ಪಿಟಿಐ
Published 19 ಫೆಬ್ರುವರಿ 2025, 0:20 IST
Last Updated 19 ಫೆಬ್ರುವರಿ 2025, 0:20 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಹಾಗೂ ಚುನಾವಣಾ ಆಯುಕ್ತರನ್ನು 2023ರ ಕಾಯ್ದೆಯಡಿ ನೇಮಕ ಮಾಡುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ‘ಆದ್ಯತೆ ಮೇಲೆ’ ಫೆ.19ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಸ್ವಯಂ ಸೇವಾ ಸಂಸ್ಥೆ ‘ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್‌) ಹಾಗೂ ಜಯಾ ಠಾಕೂರ್‌ ಪರ ವಕೀಲರ ನಿವೇದನೆ ಆಲಿಸಿದ ನಂತರ, ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎನ್‌.ಕೋಟೀಶ್ವರ ಸಿಂಗ್‌ ಅವರು ಇದ್ದ ನ್ಯಾಯಪೀಠ ಈ ಮಾತು ಹೇಳಿದೆ.

ADVERTISEMENT

ಎಡಿಆರ್‌ ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ ಭೂಷಣ್, ‘ಸಿಜೆಐ ಅವರನ್ನೂ ಒಳಗೊಂಡ ಸಮಿತಿಯ ಶಿಫಾರಸು ಮೂಲಕವೇ ಸಿಇಸಿ ಹಾಗೂ ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡಬೇಕು ಎಂದು ಅನೂಪ್‌ ಬರನವಾಲಾ ಪ್ರಕರಣದಲ್ಲಿ 2023ರಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನಿರ್ದೇಶನ ನೀಡಿತ್ತು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಈಗ, ಸಿಜೆಐ ಅವರನ್ನು ಆಯ್ಕೆ ಸಮಿತಿಯಿಂದ ಹೊರಗಿಡಲಾಗಿದೆ. ಇದು ಪ್ರಜಾಪ್ರಭುತ್ವದ ಅಣಕ’ ಎಂದು ಹೇಳಿದ ಪ್ರಶಾಂತ ಭೂಷಣ್,‘ನೂತನ ಕಾಯ್ದೆಯ ಸಿಂಧುತ್ವ ಪರಿಗಣಿಸಬೇಕು’ ಎಂದು ನ್ಯಾಯಪೀಠವನ್ನು ಕೋರಿದರು.

‘ಈ ವಿಚಾರ ಕುರಿತ ಅರ್ಜಿಗಳನ್ನು ಫೆ.19ರ ವಿಚಾರಣಾ ಪಟ್ಟಿಗೆ ಸೇರಿಸಲಾಗಿದ್ದು, ಈ ಪ್ರಕರಣದ ಅನುಕ್ರಮ ಸಂಖ್ಯೆ 41 ಇದೆ. ಸಂವಿಧಾನ ಪೀಠದ ನಿರ್ದೇಶನ ಕಡೆಗಣಿಸಿ, 2023ರ ಕಾಯ್ದೆಯಂತೆಯೇ ಕೇಂದ್ರ ಸರ್ಕಾರ ಸಿಇಸಿ ಹಾಗೂ ಚುನಾವಣಾ ಆಯುಕ್ತರ ನೇಮಕ ಮಾಡಿದೆ. ಹೀಗಾಗಿ, ಅರ್ಜಿಗಳನ್ನು ತುರ್ತು ವಿಚಾರಣೆಗೆ ಪರಿಗಣಿಸಿ’ ಎಂದು ಮನವಿ ಮಾಡಿದರು.

‘ನೂತನ ಕಾಯ್ದೆ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಆದಾಗ್ಯಾ, ಅದೇ ಕಾಯ್ದೆಯಡಿ ಈ ನೇಮಕಾತಿಗಳನ್ನು ಮಾಡಲಾಗಿದೆ’ ಎಂದು ಅರ್ಜಿದಾರರಾದ ಜಯಾ ಠಾಕೂರ್‌ ಪರ ವಕೀಲ ವರುಣ್‌ ಠಾಕೂರ್, ನ್ಯಾಯಪೀಠಕ್ಕೆ ತಿಳಿಸಿದರು.

‘2023ರ ಕಾಯ್ದೆಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು’ ಎಂದ ನ್ಯಾಯಪೀಠ, ‘ಫೆ.19ರಂದು ಅರ್ಜಿಗಳ ತುರ್ತು ವಿಚಾರಣೆ ನಡೆಸಲಾಗುವುದು’ ಎಂದು ಅರ್ಜಿದಾರರ ಪರ ವಕೀಲರಿಗೆ ಭರವಸೆ ನೀಡಿತು.

ನೂತನ ಕಾಯ್ದೆ: ಕೇಂದ್ರ ಸರ್ಕಾರವು 2023ರ ಡಿಸೆಂಬರ್‌ನಲ್ಲಿ ‘ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಬಂಧನೆಗಳು ಹಾಗೂ ಅಧಿಕಾರ) ಕಾಯ್ದೆ–2023’ ಅನ್ನು ರೂಪಿಸಿತ್ತು.

ನೂತನ ಕಾಯ್ದೆ ಪ್ರಕಾರ, ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಬದಲಾಗಿ ಕೇಂದ್ರ ಸಚಿವರೊಬ್ಬರು ಸದಸ್ಯರಾಗಿರುತ್ತಾರೆ.

2023ರ ಕಾಯ್ದೆ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಬಾಕಿ ಇರುವಾಗ ಇದೇ ಕಾಯ್ದೆಯಡಿ ಚುನಾವಣಾ ಆಯುಕ್ತರ ನೇಮಕ ಮಾಡಿರುವುದು ನ್ಯಾಯಾಂಗ ನಿಂದನೆ
ಪ್ರಶಾಂತ ಭೂಷಣ್ ಹಿರಿಯ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.