ADVERTISEMENT

ಕೃಷಿ ಕಾಯ್ದೆ ಕುರಿತು ಸುಪ್ರಿಂ ಕೋರ್ಟ್‌ನಲ್ಲಿ ಸೋಮವಾರ ಅರ್ಜಿ ವಿಚಾರಣೆ

ಪಿಟಿಐ
Published 17 ಜನವರಿ 2021, 9:16 IST
Last Updated 17 ಜನವರಿ 2021, 9:16 IST
   

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳು ಮತ್ತು ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಕುರಿತು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ.

ಕೃಷಿ ಕಾಯ್ದೆಗಳಿಂದ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ ನೇಮಿಸಿರುವ ನಾಲ್ವರು ಸದಸ್ಯರ ಸಮಿತಿಯಿಂದ ಹೊರಬರುವುದಾಗಿ ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ಭೂಪಿಂದರ್‌ ಸಿಂಗ್‌ ಮಾನ್‌ ಗುರುವಾರ ಹೇಳಿದ್ದರು. ಈ ವಿಷಯವನ್ನು ಸಹ ನ್ಯಾಯಾಲಯ ಇದೇ ಸಂದರ್ಭದಲ್ಲಿ ವಿಚಾರಣೆಗೆ ಪರಿಗಣಿಸಲಿದೆ.

ಜನವರಿ 26ರಂದು ರೈತ ಸಂಘಟನೆಗಳು ನಡೆಸಲಿರುವ ಟ್ರ್ಯಾಕ್ಟರ್‌ ರ‍್ಯಾಲಿ ಅಥವಾ ಯಾವುದೇ ರೀತಿಯ ಪ್ರತಿಭಟನೆಗೆ ತಡೆಯಾಜ್ಞೆ ನೀಡಬೇಕು ಎಂದು ದೆಹಲಿ ಪೊಲೀಸ್‌ ಮೂಲಕ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ನಡೆಯಲಿದೆ.

ADVERTISEMENT

ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ್ ರಾವ್‌ ಮತ್ತು ವಿನೀತ್‌ ಸರಣ್‌ ಅವರನ್ನೊಳಗೊಂಡ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದೆ. ಜತೆಗೆ, ಮಾನ್‌ ಅವರ ಬದಲಿಗೆ ಮತ್ತೊಬ್ಬ ಸದಸ್ಯರನ್ನು ನೇಮಿಸುವ ಸಾಧ್ಯತೆಯೂ ಇದೆ.

ಸುಪ್ರಿಂ ಕೋರ್ಟ್‌ ನೇಮಿಸಿರುವ ಸಮಿತಿಯ ಇತರ ಮೂವರು ಸದಸ್ಯರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದಾರೆ. ಹೀಗಾಗಿ, ಇವರನ್ನು ಸಮಿತಿಯಿಂದ ತೆಗೆದುಹಾಕಿ, ಪರಸ್ಪರ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಂತಹ ತಜ್ಞರನ್ನು ನೇಮಿಸಬೇಕು ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಲೋಕಶಕ್ತಿ ಸಂಘಟನೆ ಶನಿವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.