ADVERTISEMENT

ಕೈದಿಗಳ ಬಿಡುಗಡೆಗೆ ಉನ್ನತಾಧಿಕಾರ ಸಮಿತಿ: ಅಧಿಕಾರ ವ್ಯಾಪ್ತಿ ಕುರಿತು ಶೀಘ್ರ ಆದೇಶ

ಪಿಟಿಐ
Published 14 ಸೆಪ್ಟೆಂಬರ್ 2020, 12:31 IST
Last Updated 14 ಸೆಪ್ಟೆಂಬರ್ 2020, 12:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಕರಣಗಳ ಸ್ವರೂಪ ಮತ್ತು ವಾಸ್ತವ ಸ್ಥಿತಿ ಆಧರಿಸಿ ಕೋವಿಡ್‌–19 ಸಂದರ್ಭದಲ್ಲಿ ಕೈದಿಗಳ ಬಿಡುಗಡೆ ಕುರಿತಂತೆ ಆದೇಶ ಹೊರಡಿಸಲು ರಾಜ್ಯಗಳಲ್ಲಿನ ಉನ್ನತಾಧಿಕಾರ ಸಮಿತಿಗಳ ಅಧಿಕಾರ ವ್ಯಾಪ್ತಿ ಕುರಿತು ವಿವರವಾದ ಆದೇಶವನ್ನು ಹೊರಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಕೋವಿಡ್ ಸೋಂಕು ತೀವ್ರವಾಗಿ ವ್ಯಾಪಿಸಲು ಆರಂಭವಾದಂತೆ ಜೈಲುಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವ ಅಗತ್ಯವನ್ನು ಮನಗಂಡ ಸುಪ್ರೀಂ ಕೋರ್ಟ್ ಮಾರ್ಚ್ 23ರಂದು, ಈ ಕುರಿತು ಪರಿಶೀಲಿಸಲು ರಾಜ್ಯಗಳಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲು ಸೂಚಿಸಿ ಆದೇಶ ಹೊರಡಿಸಿತ್ತು.

ಪ್ರಕರಣದ ಸ್ವರೂಪ, ವಿಚಾರಣೆಯ ಅವಧಿಯನ್ನು ಆಧರಿಸಿ ಮಧ್ಯಂತರ ಜಾಮೀನು ಅಥವಾ ತುರ್ತು ಪರೋಲ್ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಸಮಿತಿ ಪರಿಶೀಲಿಸಬಹುದು ಎಂದೂ ಸೂಚಿಸಿತ್ತು.

ADVERTISEMENT

ಉನ್ನತಾಧಿಕಾರ ಸಮಿತಿಯ ಆದೇಶದ ನಂತರವು ಮಹಾರಾಷ್ಟ್ರದಲ್ಲಿ ಅನೇಕ ಕೈದಿಗಳನ್ನು ಬಿಡುಗಡೆ ಮಾಡಿಲ್ಲ ಎಂದು ಸೇವಾಸಂಸ್ಥೆ ಎನ್‌ಎಪಿಎಂ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಮೇಲಿನಂತೆ ತೀರ್ಮಾನವನ್ನು ಪ್ರಕಟಿಸಿತು.

ಸೇವಾ ಸಂಸ್ಥೆ ರಾಷ್ಟ್ರೀಯ ಸಂಚಾಲಕಿ ಮೇಧಾ ಪಾಟ್ಕರ್ ಅವರ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದು, ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿ ಇರುವ ಸುಮಾರು 17,642 ಕೈದಿಗಳನ್ನು ಮಧ್ಯಂತರ ಜಾಮೀನು ಆಧರಿಸಿ ಬಿಡುಗಡೆ ಮಾಡುವುದನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.