ADVERTISEMENT

ನಿಖಾ ಹಲಾಲ : ವಿಚಾರಣೆಗೆ ಹೊಸದಾಗಿ 5 ನ್ಯಾಯಮೂರ್ತಿಗಳ ಪೀಠ ರಚನೆ– ಸುಪ್ರೀಂ

ಪಿಟಿಐ
Published 20 ಜನವರಿ 2023, 8:47 IST
Last Updated 20 ಜನವರಿ 2023, 8:47 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ ಮತ್ತು 'ನಿಖಾ ಹಲಾಲ' ಪದ್ಧತಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಗೆ ಐದು ನ್ಯಾಯಾಮೂರ್ತಿಗಳ ಸಂವಿಧಾನ ಪೀಠವನ್ನು ಹೊಸದಾಗಿ ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಈ ಪ್ರಕರಣ ಕುರಿತಂತೆ ವಿಚಾರಣೆಗೆ ಈ ಹಿಂದೆ ರಚಿಸಲಾಗಿದ್ಧ ಸಂವಿಧಾನ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಹೇಮಂತ್ ಗುಪ್ತಾ ನಿವೃತ್ತರಾಗಿದ್ದು, ಹೊಸದಾಗಿ ಸಂವಿಧಾನ ಪೀಠ ರಚನೆಯ ಅಗತ್ಯವಿಗೆ ಎಂದು ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವವರ ಪೈಕಿ ಒಬ್ಬರಾದ ವಕೀಲ ಅಶ್ವಿನಿ ಉಪಾಧ್ಯಾಯ ಮಾಡಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ ಪರಿಗಣಿಸಿದೆ.

ಪ್ರಕರಣ ಕುರಿತಂತೆ ಐದು ನ್ಯಾಯಾಮೂರ್ತಿಗಳ ಪೀಠದ ಮುಂದೆ ಬಹಳ ಮುಖ್ಯವಾದ ವಿಷಯಗಳು ಬಾಕಿ ಉಳಿದಿವೆ. ಅದರ ವಿಚಾರಣೆಗಾಗಿ ನಾವು ಒಂದು ಪೀಠವನ್ನು ರಚಿಸುತ್ತೇವೆ’ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ. ಈ ಕುರಿತಂತೆ ಕಳೆದ ವರ್ಷದ ನವೆಂಬರ್ 2ರಂದು ವಕೀಲ ಉಪಾಧ್ಯಾಯ ಸಹ ಪ್ರಸ್ತಾಪಿಸಿದ್ದರು.

ADVERTISEMENT

ಅರ್ಜಿಗಳ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠವು ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ, ಕಾನೂನು ಆಯೋಗ ಸೇರಿದಂತೆ ಇತರರಿಗೆ ಆಗಸ್ಟ್‌ 30ರಂದು ನೋಟಿಸ್‌ ಜಾರಿಗೊಳಿಸಿತ್ತು.

ಬಹುಪತ್ನಿತ್ವ ಪದ್ಧತಿಯು ಮುಸ್ಲಿಂ ಪುರುಷನಿಗೆ ನಾಲ್ವರನ್ನು ಮದುವೆಯಾಗಲು ಅನುವು ಮಾಡಿಕೊಡುತ್ತದೆ. ನಿಖಾ ಹಲಾಲ ವಿಚ್ಛೇದನದ ನಂತರ ಮಹಿಳೆಯು ತನ್ನ ಮಾಜಿ ಪತಿಯ ಜೊತೆ ಪುನರ್‌ ವಿವಾಹ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.