ADVERTISEMENT

ವಿಸ್ಟಾ ಯೋಜನೆ: ಪರಿಸರ ಇಲಾಖೆ ಅನುಮತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಪಿಟಿಐ
Published 5 ಜನವರಿ 2021, 7:33 IST
Last Updated 5 ಜನವರಿ 2021, 7:33 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಗೆ ಕೇಂದ್ರ ಸರ್ಕಾರ ನೀಡಿದ್ದ ಅಧಿಸೂಚನೆ ಮತ್ತು ಪರಿಸರ ಇಲಾಖೆಯ ಅನುಮತಿಯನ್ನು ಸುಪ್ರೀಂ ಕೊರ್ಟ್‌ ಮಂಗಳವಾರ ಎತ್ತಿ ಹಿಡಿದಿದೆ.

ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠವು 2:1 ಬಹುಮತದೊಂದಿಗೆ, ಪರಿಸರ ಇಲಾಖೆ ಅನುಮತಿ ಮತ್ತು ಯೋಜನೆಗಾಗಿ ಭೂ ಬಳಕೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ನೀಡಿರುವ ಅಧಿಸೂಚನೆ ಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

‘ಯೋಜನೆ ಅನುಷ್ಠಾನಗೊಳಿಸುವವರು ಕಟ್ಟಡಗಳ ನಿರ್ಮಾಣ ಸ್ಥಳದಲ್ಲಿ ಹೊಗೆ ಹೊರ ಹೋಗುವ ಗೋಪುರವನ್ನು ಸ್ಥಾಪಿಸಿ, ಅದರಲ್ಲಿ ಹೊಗೆ ನಿರೋಧಕ ಕೊಳವೆ(ಗನ್‌)ಗಳನ್ನು ಬಳಸಬೇಕು‘ ಎಂದು ನ್ಯಾಯಮೂರ್ತಿ ಖಾನ್ವಿಲ್ಕರ್‌ ಮತ್ತು ದಿನೇಶ್ ಮಹೇಶ್ವರಿ ಅವರು ತೀರ್ಪಿನಲ್ಲಿ ನಿರ್ದೇಶಿಸಿದರು.

ADVERTISEMENT

ತ್ರಿಸದಸ್ಯ ನ್ಯಾಯಪೀಠದ ಮೂರನೇ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಲು ಒಪ್ಪಿಗೆ ಸೂಚಿಸಿದರೂ, ಭೂ ಬಳಕೆಯ ಬದಲಾವಣೆ ಮತ್ತು ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡಿದ್ದನ್ನು ಒಪ್ಪಲಿಲ್ಲ.

ಈ ಸಂಬಂಧ ರಾಜೀವ್ ಸೂರಿ ಸೇರಿದಂತೆ ಹಲವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

2019ರ ಸೆಪ್ಟೆಂಬರ್‌ನಲ್ಲಿ ಘೋಷಿಸಲಾದ ಪರಿಷ್ಕೃತ ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಸುಮಾರು 1,200 ಆಸನದ ಸಾಮರ್ಥ್ಯವುಳ್ಳ ತ್ರಿಕೋನಾಕಾರದ ಹೊಸ ಸಂಸತ್ ಭವನ ನಿರ್ಮಾಣ ಮಾಡಲಾಗುತ್ತದೆ. 2022ರ ಆಗಸ್ಟ್ ವೇಳೆಗೆ ಈ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.