ADVERTISEMENT

ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಪಿಟಿಐ
Published 17 ಅಕ್ಟೋಬರ್ 2025, 15:37 IST
Last Updated 17 ಅಕ್ಟೋಬರ್ 2025, 15:37 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದವು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ’ ಎಂದು ಹೇಳಿರುವ ಸುಪ್ರೀಂ ಕೋರ್ಟ್, ‘ಮೃತ ವ್ಯಕ್ತಿಗೆ ಸೇರಿದ ಎಲ್ಲಾ ಸ್ವತ್ತುಗಳು ಮುಸ್ಲಿಂ ಕಾನೂನಿನ ಪ್ರಕಾರ ಹಂಚಬೇಕಾದ ಪಿತ್ರಾರ್ಜಿತ ಆಸ್ತಿಯ ಭಾಗವಾಗಿರುತ್ತವೆ’ ಎಂದು ತೀರ್ಪು ನೀಡಿದೆ.

ಬಾಂಬೆ ಹೈಕೋರ್ಟ್‌ ತೀರ್ಪಿನ ವಿರುದ್ಧ ಜೊಹರಾಬಿ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಮೃತಪಟ್ಟ ಚಾಂದ್‌ ಖಾನ್‌ ಅವರಿಗೆ ಸೇರಿದ ಆಸ್ತಿಗಳಿಗೆ ಸಂಬಂಧಿಸಿದ ಕೌಟುಂಬಿಕ ವಿವಾದ ಇದಾಗಿದೆ. ಚಾಂದ್‌ ಖಾನ್‌ –ಜೊಹರಾಬಿ ದಂಪತಿಗೆ ಮಕ್ಕಳಿರಲಿಲ್ಲ.

‘ಚಾಂದ್‌ ಖಾನ್ ಅವರ ಆಸ್ತಿಯು ಮುಸ್ಲಿಂ ಕಾನೂನಿನಡಿ ಪಿತ್ರಾರ್ಜಿತ ಆಸ್ತಿಯಾಗಿದೆ. ಆಸ್ತಿಯ ಮುಕ್ಕಾಲು ಭಾಗ ತಮಗೆ ಸೇರಬೇಕು’ ಎಂಬುದು ವಿಧವೆ ಜೊಹರಾಬಿ ಅವರ ವಾದವಾಗಿದೆ. 

ADVERTISEMENT

ಆದರೆ, ಜೊಹರಾಬಿ ಅವರ ವಾದವನ್ನು ಚಾಂದ್‌ ಖಾನ್‌ ಅವರ ಸಹೋದರ ಇಮಾಮ್ ಖಾನ್ ಪ್ರಶ್ನಿಸಿದರು. ‘ಚಾಂದ್‌ ಖಾನ್ ಅವರ ಜೀವಿತಾವಧಿಯಲ್ಲಿ ಆಸ್ತಿಗಳ ಮಾರಾಟದ ಒಪ್ಪಂದದ ಮೂಲಕ ಮೂರನೇ ವ್ಯಕ್ತಿಗೆ ವರ್ಗಾಯಿಸಲಾಗಿದೆ’ ಎಂಬ ವಾದವನ್ನು ಇಮಾಮ್‌ ಮುಂದಿಟ್ಟರು.

‘ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದವು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ ಅಥವಾ ನಿರ್ದಿಷ್ಟ ಆಸ್ತಿಯನ್ನು ಖರೀದಿಸಲು ಮುಂದಾಗಿರುವವರಿಗೂ ಆ ಆಸ್ತಿಯ ಮೇಲೆ ಯಾವುದೇ ಅಧಿಕಾರ ನೀಡುವುದಿಲ್ಲ’ ಎಂದು ಪೀಠ ಹೇಳಿತು.

‘ಚಾಂದ್ ಖಾನ್ ಅವರ ಮರಣದ ನಂತರವೇ ಮಾರಾಟ ಒಪ್ಪಂದದ ಪತ್ರಗಳನ್ನು ಕಾರ್ಯಗತಗೊಳಿಸಲಾಗಿರುವುದರಿಂದ, ಅವರ ಮರಣದ ಸಮಯದಲ್ಲಿ ಆಸ್ತಿ ಅವರ ಬಳಿಯೇ ಇತ್ತು. ಆದ್ದರಿಂದ ಅದನ್ನು ಪಿತ್ರಾರ್ಜಿತ ಆಸ್ತಿ ಎಂದೇ ಪರಿಗಣಿಸಬೇಕು’ ಎಂದು ಜೊಹರಾಬಿ ಪರ ತೀರ್ಪು ನೀಡಿತು.

ಅನುವಾದದಲ್ಲಿ ಲೋಪ–ಅಸಮಾಧಾನ: 

ವಿಚಾರಣಾ ನ್ಯಾಯಾಲಯದ ಆದೇಶದ ಇಂಗ್ಲಿಷ್‌ ಅನುವಾದದಲ್ಲಿ ಹಲವು ಲೋಪಗಳು ಇರುವುದರ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮೇಲ್ಮನವಿಯ ವಿಚಾರಣೆಯಲ್ಲಿ ನ್ಯಾಯಯುತ ತೀರ್ಪನ್ನು ಖಚಿತಪಡಿಸಿಕೊಳ್ಳಲು ಅನುವಾದವು ಮೂಲ ಪಠ್ಯದ ಅರ್ಥ ಮತ್ತು ಸಾರಾಂಶವನ್ನು ಸರಿಯಾಗಿ ಹಿಡಿದಿಡಬೇಕು ಎಂದು ಒತ್ತಿ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.