ADVERTISEMENT

ತಮಿಳುನಾಡು: ಶಾಲಾ–ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಪುನರಾರಂಭ

ಪಿಟಿಐ
Published 1 ಸೆಪ್ಟೆಂಬರ್ 2021, 6:44 IST
Last Updated 1 ಸೆಪ್ಟೆಂಬರ್ 2021, 6:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ:ತಮಿಳುನಾಡಿನಲ್ಲಿ 9 ರಿಂದ 12 ನೇ ತರಗತಿ ಆರಂಭವಾಗಿದೆ. ಕಾಲೇಜುಗಳಲ್ಲಿಯೂ ಬುಧವಾರದಿಂದ ಭೌತಿಕ ತರಗತಿಗಳು ಆರಂಭವಾಗಿದೆ. ಈ ವೇಳೆ ಶಾಲಾ–ಕಾಲೇಜುಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಮಾರ್ಚ್‌ 20 ರಂದು ತಮಿಳುನಾಡಿನಲ್ಲಿ ಏಕಾಏಕಿ ಕೋವಿಡ್‌ ಪ್ರಕರಣಗಳು ಏರಿಕೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್‌ 22 ರಿಂದ ಮುಂದಿನ ಆದೇಶ ಬರುವವರೆಗೆ 9 ರಿಂದ 11 ನೇ ತರಗತಿಗಳನ್ನು ಮುಚ್ಚುವಂತೆ ಸೂಚಿಸಲಾಗಿತ್ತು. ಆದರೆ ಬೋರ್ಡ್‌ ಪರೀಕ್ಷೆಗಳ ನಿಮಿತ್ತ 12 ನೇ ತರಗತಿಗೆ ಕಾರ್ಯನಿರ್ವಹಿಸಲು ನಡೆಸಲು ಅನುಮತಿ ನೀಡಲಾಗಿತ್ತು.

‘ಬುಧವಾರ, ಐದು ತಿಂಗಳ ಬಳಿಕ ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಮರಳಿದ್ದಾರೆ. ಶಾಲಾ–ಕಾಲೇಜುಗಳ ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌, ಹ್ಯಾಡ್‌ ಸ್ಯಾನಿಟೈಸರ್‌ಗಳ ವ್ಯವಸ್ಥೆಗಳನ್ನು ಮಾಡಲಾಗಿದೆ ಹಾಗೂ ವಿದ್ಯಾರ್ಥಿಗಳಿಗೆ ಮುಖಗವಸನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಮಾದರಿ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು, ತರಗತಿಯಲ್ಲಿ ಶೇಕಡ 50ರಷ್ಟು ಸಾಮರ್ಥ್ಯ ಸೇರಿದಂತೆ ಹಲವು ನಿಯಾಮಾಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಸೂಚನೆ ನೀಡಿದೆ.

‘ವಿದ್ಯಾರ್ಥಿಗಳನ್ನು ವಿವಿಧ ಬ್ಯಾಚ್‌ಗಳನ್ನಾಗಿ ವಿಂಗಡಿಸಿ, ವಾರದಲ್ಲಿ ಆರು ದಿನಗಳ ಕಾಲ ತರಗತಿಗಳನ್ನು ನಡೆಸಬೇಕು. ಒಂದು ಬ್ಯಾಚ್‌ನಲ್ಲಿ 20 ವಿದ್ಯಾರ್ಥಿಗಳು ಇರಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

‘ಪೋಷಕರ ಅನುಮತಿಯಿದ್ದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಯನ್ನು ಆಯ್ದುಕೊಳ್ಳಬಹುದು. ಶಿಕ್ಷಣ ಸಂಸ್ಥೆಗಳು ತಮ್ಮ ಆವರಣಗಳನ್ನು ಶುಚಿಯಾಗಿಡಬೇಕು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಶಾಲಾ–ಕಾಲೇಜುಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಜನಸಂದಣಿ ಆಗದಂತೆ ತಡೆಯಬೇಕು’ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.