ADVERTISEMENT

ಕಾಶ್ಮೀರದ ಶಾಲೆಗಳಲ್ಲಿ ಮತ್ತೆ ಕಲರವ

ಏಳು ತಿಂಗಳ ಬಳಿಕ ಪಾಠ ಪ್ರವಚನ ಆರಂಭ: ಉತ್ಸಾಹದಿಂದ ಬಂದ ಸಾವಿರಾರು ಮಕ್ಕಳು

ಪಿಟಿಐ
Published 24 ಫೆಬ್ರುವರಿ 2020, 19:33 IST
Last Updated 24 ಫೆಬ್ರುವರಿ 2020, 19:33 IST
ಏಳು ತಿಂಗಳ ಬಳಿಕ ಶಾಲೆಗೆ ಬಂದ ಮಕ್ಕಳು –ಪಿಟಿಐ ಚಿತ್ರ
ಏಳು ತಿಂಗಳ ಬಳಿಕ ಶಾಲೆಗೆ ಬಂದ ಮಕ್ಕಳು –ಪಿಟಿಐ ಚಿತ್ರ   

ಶ್ರೀನಗರ: ಏಳು ತಿಂಗಳ ಬಳಿಕ ಕಾಶ್ಮೀರ ಕಣಿವೆಯ ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿಸಿದೆ. ಕಣಿವೆಯ ಶಾಲೆಗಳಲ್ಲಿ ಪಾಠಪ್ರವಚನಗಳು ಪುನಃ ಆರಂಭವಾಗಿದ್ದು, ಸಾವಿರಾರು ಮಕ್ಕಳು ಸೋಮವಾರ ಶಾಲೆಗೆ ಹಾಜರಾದರು.

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್‌ ತಿಂಗಳಲ್ಲಿ ರದ್ದು ಮಾಡಿದ ಬಳಿಕ, ಕಣಿವೆ ರಾಜ್ಯದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾವಾಗಿತ್ತು. ಅಂದಿನಿಂದ ಶಾಲೆಗಳು ಸಂಪೂರ್ಣವಾಗಿ ಮುಚ್ಚಿದ್ದವು.

‘ಸುದೀರ್ಘ ಅವಧಿಯಿಂದ ಮನೆಯಲ್ಲೇ ಕುಳಿತಿದ್ದ ಮಕ್ಕಳು ತುಂಬಾ ಉತ್ಸಾಹದಿಂದ ಶಾಲೆಗೆ ಬಂದಿದ್ದಾರೆ. ಅವರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಮನೆಯಲ್ಲಿ ಕೆಲಸವಿಲ್ಲದೆ ಕಾಲ ಕಳೆಯಬೇಕಾಗಿತ್ತು. ಮನೆಯಲ್ಲೇ ಕುಳಿತು ಬೇಸರವಾಗಿತ್ತು. ಶಾಲೆಯ ಬಾಗಿಲುತೆರೆದಿರುವುದರಿಂದ ತುಂಬಾ ಖುಷಿಯಾಗಿದೆ’ ಎಂದು ಆರನೇ ತರಗತಿಯವಿದ್ಯಾರ್ಥಿಯೊಬ್ಬ ಮಾಧ್ಯಮ ಪ್ರತಿನಿಧಿಗಳ ಮುಂದೆ ಸಂತಸ ವ್ಯಕ್ತಪಡಿಸಿದ್ದಾನೆ.

‘ಹಲವು ತಿಂಗಳುಗಳಿಂದ ಪಾಠನಡೆಯಲಿಲ್ಲ. ಆದರೆ ಶಾಲಾ ಅಸೈನ್‌ಮೆಂಟ್‌ ಪಡೆಯಲು ಪಾಲಕರ ಜತೆಗೆ ನಾಲ್ಕಾರು ಬಾರಿ ಶಾಲೆಗೆ ಬಂದಿದ್ದೇನೆ. ಓದಿ ವೈದ್ಯನಾಗಬೇಕು ಎಂಬ ಇಚ್ಛೆ ಇದೆ’ ಎಂದು ನಾಲ್ಕನೇ ತರಗತಿಯ ಬಾಲಕ ನೂಮಾನ್‌ ಹೇಳಿದ್ದಾನೆ.

ಇನ್ನು ಮುಂದೆ ಯಾವುದೇ ಅಡೆತಡೆಗಳಿಲ್ಲದೆ ಪಾಠಪ್ರವಚನಗಳು ನಡೆಯಬಹುದು ಎಂಬ ವಿಶ್ವಾಸವನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ. ‘ನಾನು ರಾಜಕೀಯದ ವಿಚಾರ ಮಾತನಾಡುವುದಿಲ್ಲ. ಆದರೆ, ಬೇರೆಬೇರೆ ಕಾರಣಗಳಿಂದ ಕಳೆದ ವರ್ಷ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಈ ವರ್ಷವಾದರೂ ಯಾವುದೇ ಅಡೆತಡೆಗಳಿಲ್ಲದೆ ಶಾಲೆಗಳು ನಡೆಯಬೇಕು ಎಂಬುದು ನಮ್ಮ ಇಚ್ಛೆ’ ಎಂದು ಖಾಸಗಿ ಶಾಲೆಯೊಂದರ ಶಿಕ್ಷಕಿ ಹೇಳಿದ್ದಾರೆ.

ವಿಶೇಷ ಸ್ಥಾನಮಾನ ರದ್ದತಿಯ ಬಳಿಕ, ಶಾಲೆಗಳಲ್ಲಿ ಪಾಠಪ್ರವಚನಗಳನ್ನು ಆರಂಭಿಸಬೇಕೆಂದು ಏಳು ಬಾರಿ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿತ್ತು. ಆದರೆ ಪ್ರಕ್ಷುಬ್ಧ ಸ್ಥಿತಿ ಇದ್ದುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಒಪ್ಪಲಿಲ್ಲ. ವರ್ಷದ ಕೊನೆ
ಯಲ್ಲಿ ಕೆಲವು ಶಾಲೆಗಳು ಬಾಗಿಲುಗಳನ್ನು ತೆರೆದರೂ ಸಮವಸ್ತ್ರ ಧರಿಸದೆಯೇ ಶಾಲೆಗೆ ಹಾಜರಾಗುವಂತೆ ಮಕ್ಕಳಿಗೆ ಸೂಚನೆ ನೀಡಲಾಗಿತ್ತು.

‘ಶಿಕ್ಷಕರಿಗೆ ಬೆಂಬಲ ನೀಡಬೇಕಾದ್ದು ನಮ್ಮ ಜವಾಬ್ದಾರಿ, ನಿಗದಿತ ಅವಧಿಯೊಳಗೆ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡಲಾಗುವುದು’ ಎಂದು ಶಿಕ್ಷಣ ಇಲಾಖೆಯ ನಿರ್ದೇಶಕ ಮಹಮ್ಮದ್‌ ಯೂನಿಸ್‌ ಭರವಸೆ ನೀಡಿದ್ದಾರೆ.

ಟ್ರಂಪ್‌ ಭೇಟಿ ಹಿನ್ನೆಲೆ: ಭದ್ರತೆ ಬಿಗಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಯ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಭಾರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಶಾಂತಿ ಕದಡುವ ಯತ್ನ ನಡೆಯಬಾರದು ಎಂಬ ಕಾರಣಕ್ಕೆ ಭದ್ರತೆ ಬಿಗಿಗೊಳಿಸಲಾಗಿದೆ.ಶ್ರೀನಗರ ಮತ್ತು ಇತರ ಪ್ರಮುಖ ನಗರಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ವಿಶೇಷ ಭದ್ರತಾ ತಪಾಸಣೆ ನಡೆಸಲಾಗುತ್ತಿದೆ. ಶಂಕಿತ ವ್ಯಕ್ತಿಗಳ ಚಲನೆಯನ್ನು ತಡೆಯುವುದಕ್ಕಾಗಿ ಭದ್ರತಾ ಪಡೆಗಳ ಗಸ್ತು ಹೆಚ್ಚಿಸಲಾಗಿದೆ.

ಟ್ರಂಪ್‌ ಭೇಟಿಯ ಎರಡು ದಿನಗಳಲ್ಲಿ ಉಗ್ರರ ದಾಳಿ ನಡೆಯಬಹುದು ಎಂಬ ಗುಪ್ತಚರ ಮಾಹಿತಿಯೇನೂ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.