ನವದೆಹಲಿ: ದೇಶದಲ್ಲಿ ಕೋವಿಡ್–19 ಪ್ರಕರಣಗಳು ಮತ್ತೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಾಂಕ್ರಾಮಿಕದ ಬಗ್ಗೆ ಆರಂಭದಿಂದಲೂ ನಿಗಾ ಇಟ್ಟಿರುವ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಇತರರಿಗೆ ಸೋಂಕು ಹರಡುವ ವಿಚಾರದಲ್ಲಿ ವೈರಸ್‌ಗಿರುವ ಸಾಮರ್ಥ್ಯ ಮಾನದಂಡವಾಗಿಟ್ಟುಕೊಂಡು, ಕಾಯಿಲೆ ಮುನ್ಸೂಚನೆ ಮಾದರಿ ‘ಆರ್ (ವೈರಸ್‌ನ ಪ್ರತ್ಯುತ್ಪಾದನೆ ಸಂಖ್ಯೆ)’ ಅನ್ನು ಗಮನದಲ್ಲಿಟ್ಟುಕೊಂಡು ಸೆಪ್ಟಂಬರ್ 17ರ ನಂತರದ ಲೆಕ್ಕಾಚಾರದಲ್ಲಿ ನಡೆಸಿದ ಅಧ್ಯಯನದ ಆಧಾರದಲ್ಲಿ ಎಚ್ಚರಿಕೆ ನೀಡಲಾಗಿದೆ.
‘ಕಳೆದ ವಾರದ ಪ್ರವೃತ್ತಿ ಸೆಪ್ಟೆಂಬರ್ ಮಧ್ಯಭಾಗದಿಂದ ಈವರೆಗೆ ನೋಡಿದ್ದರಲ್ಲಿ ಕೆಟ್ಟದ್ದಾಗಿದೆ. ಆಗ ‘ಆರ್’ ಮೌಲ್ಯ ದೇಶದಲ್ಲಿ 1ಕ್ಕಿಂತ ಕಡಿಮೆಯಾಗಿತ್ತು. ಫೆಬ್ರುವರಿ 17ರ ವರೆಗೂ ಅದು 1ಕ್ಕಿಂತ ಕಡಿಮೆಯೇ ಇತ್ತು. ಸೆಪ್ಟೆಂಬರ್ 17ರ ನಂತರ ಇದೇ ಮೊದಲ ಬಾರಿಗೆ ‘ಆರ್’ ಮೌಲ್ಯ 1ಕ್ಕಿಂತ ಮೇಲೇರಿದೆ’ ಎಂದು ಚೆನ್ನೈನ ಗಣಿತವಿಜ್ಞಾನಗಳ ಸಂಸ್ಥೆಯ ಗಣಿತಶಾಸ್ತ್ರಜ್ಞ ಸಿತಾಭ್ರ ಸಿನ್ಹಾ ‘ಡೆಕ್ಕನ್ ಹೆರಾಲ್ಡ್’ಗೆ ತಿಳಿಸಿದ್ದಾರೆ.
‘ಆರ್’ ಎಂಬುದು ಕೊರೊನಾ ವೈರಸ್‌ನ (SARS-CoV-2) ಹರಡುವ ಸಾಮರ್ಥ್ಯದ ಮಾನದಂಡವಾಗಿದೆ. ಉದಾಹರಣೆಗೆ; ವಿಜ್ಞಾನಿಗಳ ಪ್ರಕಾರ, 1.9ರಷ್ಟು ‘ಆರ್’ ಮೌಲ್ಯ ಇದ್ದರೆ 10 ಕೋವಿಡ್ ಸೋಂಕಿತರು 19 ಮಂದಿಗೆ ಸೋಂಕು ಹರಡಬಲ್ಲರು. ಹೀಗಾಗಿ ‘ಆರ್’ ಮೌಲ್ಯ 1ಕ್ಕಿಂತ ಕಡಿಮೆ ಇರಬೇಕಿದೆ.
‘ಸದ್ಯ ಅತಿಹೆಚ್ಚು ಸಕ್ರಿಯ ಪ್ರಕರಣಗಳಿರುವ 16 ರಾಜ್ಯಗಳ ಪೈಕಿ 7ರಲ್ಲಿ ‘ಆರ್’ ಮೌಲ್ಯ 1ಕ್ಕಿಂತ ಹೆಚ್ಚಿದೆ. ಈ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಇದೆ’ ಎಂದು ಸಿನ್ಹಾ ಹೇಳಿದ್ದಾರೆ.
ಕರ್ನಾಟಕ, ಪಂಜಾಬ್, ಹರಿಯಾಣ, ಮಧ್ಯ ಪ್ರದೇಶ, ಗುಜರಾತ್ ಹಾಗೂ ಛತ್ತೀಸಗಢದಲ್ಲಿಯೂ ಮುಂದಿನ ವಾರಗಳಲ್ಲಿ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ. ಅಸ್ಸಾಂ, ತೆಲಂಗಾಣ, ದೆಹಲಿ ಹಾಗೂ ತಮಿಳುನಾಡಿನಲ್ಲಿ ‘ಆರ್’ ಮೌಲ್ಯ ಸಮಾಧಾನಕರವಾಗಿದ್ದು, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ರಾಜಸ್ಥಾನದಲ್ಲಿ 1ಕ್ಕಿಂತ ಕೆಳಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.