ADVERTISEMENT

‘ವಿಶೇಷಾಧಿಕಾರ ರದ್ದತಿಯಿಂದ ಭಯೋತ್ಪಾದನೆಗೆ ಕಡಿವಾಣ’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 18:23 IST
Last Updated 15 ಅಕ್ಟೋಬರ್ 2019, 18:23 IST

ನವದೆಹಲಿ: ‘ಜಮ್ಮು ಕಾಶ್ಮೀರದಲ್ಲಿ ದಶಕಗಳಿಂದ ನಡೆಯುತ್ತಿದ್ದ ಪಾಕಿಸ್ತಾನ ಪ್ರೇರಿತ ಭಯೋತ್ಪಾದನಾ ಕೃತ್ಯಗಳಿಗೆ ಅಂತ್ಯ ಹಾಡುವುದೇ, ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಗೊಳಿಸುವುದರ ಹಿಂದಿನ ಉದ್ದೇಶವಾಗಿತ್ತು’ ಎಂದು ಗೃಹಸಚಿವ ಅಮಿತ್‌ ಶಾ ಮಂಗಳವಾರ ಹೇಳಿದರು.

ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) 35ನೇ ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೋದಿ ನೇತೃತ್ವದ ಸರ್ಕಾರವು ಭಯೋತ್ಪಾದನೆಯ ವಿರುದ್ಧ ‘ಶೂನ್ಯ ತಾಳಿಕೆ’ ನೀತಿಯನ್ನು ಅನುಸರಿಸಿದೆ. ವಿಶೇಷಾಧಿಕಾರವನ್ನು ರದ್ದುಪಡಿಸಿದ್ದರಿಂದ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಹಲವು ದಶಕಗಳಿಂದ ನಡೆಸುತ್ತಿರುವ ಪರೋಕ್ಷ ಯುದ್ಧ ಹಾಗೂ ಭಯೋತ್ಪಾದನಾ ಕೃತ್ಯಗಳನ್ನು ಕೊನೆಗಾಣಿಸಲು ಸಾಧ್ಯ. ಈ ರಾಜ್ಯದಲ್ಲಿ ದೀರ್ಘಕಾಲದವರೆಗೂ ಶಾಂತಿ ನೆಲೆಸಲಿದೆ’ ಎಂದರು.

ಎನ್‌ಎಸ್‌ಜಿಯ ಸಾಮರ್ಥ್ಯವನ್ನು ಶ್ಲಾಘಿಸಿದ ಶಾ, ‘ಭಯೋತ್ಪಾದನೆಯ ವಿರುದ್ಧ ಹೋರಾಡುವ ತನ್ನ ಸಾಮರ್ಥ್ಯದ ಮೂಲಕ ಎನ್‌ಎಸ್‌ಜಿಯು ಜಗತ್ತಿನ ಗಮನವನ್ನು ಸೆಳೆದಿದೆ. ನಾವು ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ದೇಶದ ನಾಗರಿಕರಲ್ಲಿ ಮೂಡುವಂತಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.