ಕಾಂಗ್ರೆಸ್ ಟಿಕೆಟ್ ಹಂಚಿಕೆ
ನವದೆಹಲಿ: ಬಿಹಾರ ವಿಧಾನಸಭೆಗೆ ‘ಇಂಡಿಯಾ‘ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಒಮ್ಮತಾಭಿಪ್ರಾಯ ಮೂಡಿಲ್ಲವಾದರೂ ಕಾಂಗ್ರೆಸ್ ಹಲವು ಅಭ್ಯರ್ಥಿಗಳನ್ನು ಹೆಸರಿಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬಿಹಾರ ಕಾಂಗ್ರೆಸ್ ಮಾಹಿತಿ ಹಂಚಿಕೊಂಡಿದೆ. ಕೆಲ ಅಭ್ಯರ್ಥಿಗಳಿಗೆ ಪಕ್ಷದಿಂದ ಟಿಕೆಟ್ ನೀಡಿರುವುದನ್ನು ಫೋಟೊ ಸಹಿತ ಕಾಂಗ್ರೆಸ್ ಹಂಚಿಕೊಂಡಿದೆ. ಆದಾಗ್ಯೂ ಕಾಂಗ್ರೆಸ್‌ನ ಅಧಿಕೃತ ಪಟ್ಟಿ ಬಿಡುಗಡೆಯಾಗಬೇಕಿದೆ.
ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 121 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಅವಧಿ ಕೊನೆಗೊಳ್ಳಲು ಎರಡು ದಿನಗಳಷ್ಟೇ ಉಳಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೆಲ ಅಭ್ಯರ್ಥಿಗಳಿಗೆ ಬಿ.ಪಾರಂ ನೀಡಿದೆ.
ಬಿಹಾರ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ರಾಮ್, ಶಕೀಲ್ ಅಹ್ಮದ್ ಖಾನ್, ಆನಂದ ಶಂಕರ್ ಸಿಂಗ್, ಪ್ರತಿಮಾ ದಾಸ್, ವಿಜಯೇಂದ್ರ ಚೌಧರಿ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷದಿಂದ ಬಿ.ಪಾರಂ ಪಡೆದುಕೊಂಡಿದ್ದಾರೆ.
ಪಕ್ಷಕ್ಕೆ 70 ಸ್ಥಾನಗಳನ್ನು ಬಿಟ್ಟುಕೊಡಬೇಕು’ ಎಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಆದರೆ, 60ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಲು ಆರ್‌ಜೆಡಿ ಒಪ್ಪಿರಲಿಲ್ಲ. ಪಕ್ಷಕ್ಕೆ 58–60 ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ಆದರೆ, ಇದೀಗ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡಲು ಉಭಯ ಪಕ್ಷಗಳು ಒಪ್ಪಿಲ್ಲ. ಹೀಗಾಗಿ, ಕಗ್ಗಂಟು ಮುಂದುವರಿದಿದೆ.
ಇಂಡಿಯಾ ಕೂಟದ ಮುಖೇಶ್ ಸಹಾನಿ ನೇತೃತ್ವದ ವಿಕಾಸಶೀಲ ಇನ್ಸಾನ್ ಪಕ್ಷಕ್ಕೆ ಸುಮಾರು 17-18 ಸ್ಥಾನಗಳನ್ನು ನೀಡಲು ಸಹಮತ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಎಡ ಪಕ್ಷಗಳು ಕನಿಷ್ಠ 30 ಕ್ಷೇತ್ರಗಳನ್ನು ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದವು. ಈ ಪ್ರಸ್ತಾವವನ್ನು ಆರ್‌ಜೆಡಿ ತಿರಸ್ಕರಿಸಿತ್ತು. ಸಿಪಿಐ(ಎಂ)ಎಲ್‌ಗೆ 19 ಕ್ಷೇತ್ರಗಳನ್ನು ನೀಡಲು ಆರ್‌ಜೆಡಿ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.