ನವದೆಹಲಿ: ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಪರಾಮರ್ಶೆ ನಡೆಸುವುದಕ್ಕಾಗಿ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಎರಡನೇ ಸಭೆ ಜನವರಿ 31ರಂದು ನಡೆಯಲಿದೆ.
ಈ ಬಗ್ಗೆ ಲೋಕಸಭೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ತಿದ್ದುಪಡಿ ಮಸೂದೆಗಳ ಪರಾಮರ್ಶೆಗೆ ಸಂಬಂಧಿಸಿದ ಪ್ರಕ್ರಿಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಸಂವಿಧಾನ (129ನೇ ತಿದ್ದುಪಡಿ) ಮಸೂದೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳು(ತಿದ್ದುಪಡಿ) ಮಸೂದೆಗಳನ್ನು ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ನಂತರ, ಅವುಗಳನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು.
ಜ.8ರಂದು ನಡೆದಿದ್ದ ಸಮಿತಿಯ ಮೊದಲ ಸಭೆಯಲ್ಲಿ, ಕಾನೂನು ಮತ್ತು ನ್ಯಾಯ ಸಚಿವಾಲಯದ ಪ್ರತಿನಿಧಿಗಳು ಹಾಜರಾಗಿ, ಸಮಿತಿ ಸದಸ್ಯರಿಗೆ ವಿವರಣೆ ನೀಡಿದ್ದರು.
ಕೆಲ ವಿವಾದಾತ್ಮಕ ಅಂಶಗಳ ಕುರಿತು ಈ ಮೊದಲ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಅದರಲ್ಲೂ, ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಬೇಕು ಎಂಬ ಪರಿಕಲ್ಪನೆಯು ಸಂವಿಧಾನದ ಮೂಲ ಸ್ವರೂಪ ಹಾಗೂ ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ಎಂಬುದಾಗಿ ಸಮಿತಿಯಲ್ಲಿರುವ ವಿಪಕ್ಷಗಳ ಸದಸ್ಯರು ಟೀಕಿಸಿದ್ದರು.
ಬಿಜೆಪಿ ಸಂಸದ ಪಿ.ಪಿ.ಚೌಧರಿ ನೇತೃತ್ವದ ಜಂಟಿ ಸದನ ಸಮಿತಿಯಲ್ಲಿ, 27 ಲೋಕಸಭೆ ಸಂಸದರು ಹಾಗೂ 12 ರಾಜ್ಯಸಭೆ ಸಂಸದರು ಸೇರಿ 39 ಸದಸ್ಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.