ADVERTISEMENT

ತಾಲಿಬಾನ್‌ ಎದುರಿಸಲು ಹೊಸ ತಂತ್ರ: ಭದ್ರತಾ ಪಡೆ, ಸಶಸ್ತ್ರ ಪಡೆಗಳಿಗೆ ತರಬೇತಿ

ಭದ್ರತಾ ಪಡೆ, ಸಶಸ್ತ್ರ ಪಡೆಗಳಿಗೆ ಉನ್ನತ ಮಟ್ಟದ ತರಬೇತಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 16:22 IST
Last Updated 12 ಸೆಪ್ಟೆಂಬರ್ 2021, 16:22 IST
ಭಾರತೀಯ ಭದ್ರತಾ ಪಡೆಯ ಸೈನಿಕರು
ಭಾರತೀಯ ಭದ್ರತಾ ಪಡೆಯ ಸೈನಿಕರು    

ನವದೆಹಲಿ: ಭಯೋತ್ಪಾದನೆ ನಿಗ್ರಹ ಕಾರ್ಯಕ್ಕೆ ನಿಯೋಜನೆಗೊಂಡಿರುವ ಗಡಿ ಭದ್ರತಾ ಪಡೆಗಳು ಮತ್ತು ಸಶಸ್ತ್ರ ಪಡೆಗಳಿಗೆ ತಾಲಿಬಾನ್‌ ಮತ್ತು ಅದರ ಕಾರ್ಯಾಚರಣೆ ವಿಧಾನದ ಬಗ್ಗೆ ತರಬೇತಿ ನೀಡುವಂತೆ ಕೇಂದ್ರೀಯ ಭದ್ರತಾ ವ್ಯವಸ್ಥೆ ಸೂಚಿಸಿದೆ. ಅಫ್ಗಾನಿಸ್ತಾನವನ್ನು ತಾಲಿಬಾನ್‌ ಕೈವಶ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಗೆಲುವು ಭಾರತದ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಭದ್ರತಾ ಪಡೆಗಳು ಮತ್ತು ಗುಪ್ತಚರ ಪಡೆಗಳಿಗೆ ತಂತ್ರ, ಕೌಶಲ ಮತ್ತು ಹೋರಾಟದ ಮಾದರಿಗಳನ್ನು ನವೀಕರಿಸುವಂತೆ ಹೇಳಲಾಗಿದೆ. ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ಏರ್ಪಟ್ಟಿರುವ ಭೌಗೋಳಿಕ–ರಾಜಕೀಯ ಪರಿಸ್ಥಿತಿ ದೇಶದ ಗಡಿ ಮತ್ತು ಒಳನಾಡಿನಲ್ಲಿ ಭಾರಿ ಭದ್ರತಾ ಸಮಸ್ಯೆ ತಂದೊಡ್ಡುವ ಆತಂಕವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ಪಶ್ಚಿಮದಲ್ಲಿ ಪಾಕಿಸ್ತಾನದ ಗಡಿಯಿಂದ ಒಳನುಸುಳುವ ಉಗ್ರರು ಮತ್ತು ಪೂರ್ವದ ಗಡಿಯಿಂದ ದೇಶದ ಒಳಗೆ ನುಸುಳುವ ವಿದೇಶಿ ಉಗ್ರರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದು ಈಗಾಗಲೇ ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ. ಅಫ್ಗಾನಿಸ್ತಾನದ ಬೆಳವಣಿಗೆಗಳಿಂದ ನೆರೆಯ ದೇಶಗಳಲ್ಲಿ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಕೇಂದ್ರೀಯ ಭದ್ರತಾ ಪಡೆಗಳು ಮತ್ತು ಗುಪ್ತಚರ ದಳದ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಗಡಿ ಭದ್ರತಾ ಪಡೆಗಳಾದ ಬಿಎಸ್‌ಎಫ್‌, ಎಸ್‌ಎಸ್‌ಬಿ, ರಾಜ್ಯ ಪೊಲೀಸ್‌ ಪಡೆಗಳು, ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ತೊಡಗಿರುವ ಸಿಆರ್‌ಪಿಎಫ್‌ ಮತ್ತು ಜಮ್ಮು–ಕಾಶ್ಮೀರ ಪೊಲೀಸರಿಗೆ ಗಡಿ ನಿರ್ವಹಣೆಯ ಕಾರ್ಯವಿಧಾನವನ್ನು ಬದಲಿಸಿಕೊಳ್ಳಲು ಹೇಳಲಾಗಿದೆ. ಇದೇ ರೀತಿಯ ನಿರ್ದೇಶನವನ್ನು ಕೇಂದ್ರ ಮತ್ತು ರಾಜ್ಯ ಪೊಲೀಸ್‌ ಪಡೆಗಳಿಗೂ ನೀಡಲಾಗಿದೆ.

ತಾಲಿಬಾನ್‌, ಅದರ ನಾಯಕತ್ವ ಮತ್ತು ಅದರ ಕಾರ್ಯವಿಧಾನವನ್ನು ಎದುರಿಸಲು ಪೂರ್ಣ ಪ್ರಮಾಣದ ತರಬೇತಿ, ಗುಪ್ತಚರ ಮಾಹಿತಿ ಸಂಗ್ರಹ ಕಾರ್ಯತಂತ್ರ ಮತ್ತು ಪ್ರತಿದಾಳಿ ಕಾರ್ಯವಿಧಾನ ಸಿದ್ಧವಾಗುತ್ತಿದೆ. ಹಲವಾರು ನಿರ್ದಿಷ್ಟ ಪ್ರಕರಣಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿ ಠಾಣೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ತಾಲಿಬಾನ್‌ ಇತಿಹಾಸ ಮತ್ತು ಅದರ ತಂತ್ರಗಾರಿಕೆ ಕುರಿತು ಅರಿವಿರಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಚ್ಚಾ ಬಾಂಬ್‌ ಮತ್ತು ವಾಹನಗಳ ಮೂಲಕ ಸ್ಫೋಟದ ಕುರಿತು ಸಿಬ್ಬಂದಿಗಳ ತಿಳಿವಳಿಕೆಯನ್ನು ಹೆಚ್ಚಿಸುವ ದಿಸೆಯಲ್ಲಿ ಭದ್ರತಾ ಪಡೆಗಳು ತರಬೇತಿಯನ್ನು ಉನ್ನತೀಕರಿಸಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.