ADVERTISEMENT

ಬಿಸಿಐ ನಿಯಮ ಪ್ರಶ್ನಿಸಿ ‘ಸುಪ್ರೀಂ’ ಮೊರೆ ಹೋದ ವೃದ್ಧೆ

ಕಾನೂನು ಪದವಿಗೆ ವಯೋಮಿತಿ ನಿಗದಿಪಡಿಸಿದ್ದಕ್ಕೆ ಆಕ್ಷೇಪ

ಪಿಟಿಐ
Published 13 ಸೆಪ್ಟೆಂಬರ್ 2020, 9:19 IST
Last Updated 13 ಸೆಪ್ಟೆಂಬರ್ 2020, 9:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕಾನೂನು ಪದವಿ ಪಡೆಯಲು ಗರಿಷ್ಠ ವಯೋಮಿತಿ ನಿಗದಿಪಡಿಸಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ರೂಪಿಸಿರುವ ನಿಯಮವನ್ನು ಪ್ರಶ್ನಿಸಿ 77 ವರ್ಷದ ವೃದ್ಧೆಯೊಬ್ಬರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಐದು ವರ್ಷಗಳ ಕಾನೂನ ಪದವಿ ಪ್ರವೇಶ ಪಡೆಯಲು ಗರಿಷ್ಠ 20 ವರ್ಷ ಮೀರಬಾರದು ಮತ್ತು ಮೂರು ವರ್ಷಗಳ ಕಾನೂನು ಪದವಿಗೆ ಗರಿಷ್ಠ 30 ವರ್ಷ ಮೀರಬಾರದು ಎಂದು ಬಿಸಿಐ ನಿಯಮ ರೂಪಿಸಿದೆ. ಈ ನಿಯಮವನ್ನು ಪ್ರಶ್ನಿಸಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಬಾಕಿ ಉಳಿದಿದೆ.

ಪತಿ ಮೃತಪಟ್ಟ ಬಳಿಕ ಏಕಾಂಗಿಯಾದ ಉತ್ತರ ಪ್ರದೇಶದ ಶಹಿಬಾಬಾದ್‌ ನಿವಾಸಿ ರಾಜಕುಮಾರಿ ತ್ಯಾಗಿ (77) ಅವರು ಜಮೀನಿನ ದಾಖಲೆಗಳು ಮತ್ತು ಉಯಿಲು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಿನ ಜ್ಞಾನ ಪಡೆದುಕೊಳ್ಳಲು ಮುಂದಾದರು. ಇದಕ್ಕಾಗಿ ಮೂರು ವರ್ಷದ ಕಾನೂನು ಪದವಿ ಪಡೆಯಲು ಆಸಕ್ತಿ ವಹಿಸಿದರು. ಆದರೆ, ಅವರಿಗೆ ಬಿಸಿಐ ರೂಪಿಸಿದ ನಿಯಮದ ಅನ್ವಯ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಲಾಯಿತು.

ADVERTISEMENT

ತಮಗೆ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿ ರಾಜಕುಮಾರಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

‘ಬಿಸಿಐ ರೂಪಿಸಿರುವ ಈ ಹೊಸ ನಿಯಮವು ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಯಾವುದೇ ವೃತ್ತಿ ಹೊಂದುವ ಅವಕಾಶವನ್ನು ನಿರಾಕರಿಸುತ್ತದೆ’ ಎಂದು ರಾಜಕುಮಾರಿ ಅವರು ಪ್ರತಿಪಾದಿಸಿದ್ದಾರೆ.

‘ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆಯುವ ಹಕ್ಕು ತನಗಿದೆ. ಸಂವಿಧಾನದ ಅನ್ವಯ ತನ್ನ ಹಕ್ಕು ಕಾಪಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.