ADVERTISEMENT

ನ್ಯಾಯಮೂರ್ತಿಗಳ ‌ಆಯ್ಕೆಯಲ್ಲಿ ತಾರತಮ್ಯ ತೊಂದರೆದಾಯಕ: ಸುಪ್ರೀಂ ಕೋರ್ಟ್‌

ಕೊಲಿಜಿಯಂ ಶಿಫಾರಸುಗಳಿಗೆ ತ್ವರಿತ ಅನುಮೋದನೆ ನೀಡದ್ದಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 15:55 IST
Last Updated 20 ಅಕ್ಟೋಬರ್ 2023, 15:55 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿ ಕೊಲಿಜಿಯಂ ಶಿಫಾರಸು ಮಾಡುವ ಹೆಸರುಗಳ ವಿಚಾರವಾಗಿ ತಾರತಮ್ಯ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ.

‘ಇಂಥ ನಡೆಯಿಂದ ಸೇವಾ ಹಿರಿತನಕ್ಕೆ ಧಕ್ಕೆಯಾಗುತ್ತದೆ. ಅಲ್ಲದೇ, ಅರ್ಹ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸುವುದಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎಂದೂ ಹೇಳಿದೆ.

ADVERTISEMENT

ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯಕಿಶನ್‌ ಕೌಲ್, ಸುಧಾಂಶು ಧುಲಿಯಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠ, ಈ ಮಾತು ಹೇಳಿದೆ.

ಶಿಫಾರಸು ಮಾಡಲಾದ ಕೆಲವರ ಹೆಸರುಗಳ ಕಾರಣದಿಂದಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಒಡಕು ಮೂಡಿದಲ್ಲಿ ತೊಂದರೆ ತಪ್ಪಿದ್ದಲ್ಲ. ಇದರಿಂದ, ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದವರ ಪೈಕಿ ಕೆಲವರು ನೇಮಕವಾಗುತ್ತಾರೆ, ಇನ್ನೂ ಕೆಲವರ ನೇಮಕಾತಿ ನಡೆಯುವುದಿಲ್ಲ ಎಂದು ನ್ಯಾಯಪೀಠ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಬಲ್ಬೀರ್‌ ಸಿಂಗ್‌, ‘ಬಾಕಿ ಉಳಿದಿರುವ ನೇಮಕಾತಿ ಪ್ರ‌ಕ್ರಿಯೆ ಹಾಗೂ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ವರ್ಗಾವಣೆ ಕುರಿತು ನಿರ್ಧಾರ ಕೈಗೊಳ್ಳಲು ಎರಡು ವಾರಗಳ ಸಮಯಾವಕಾಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

‘ಈ ವರೆಗಿನ ಶಿಫಾರಸುಗಳ ಆಧಾರದಲ್ಲಿ ನಡೆದ ನೇಮಕಾತಿ ಸಂಬಂಧ ಅಧಿಸೂಚನೆಗಳನ್ನು ಹೊರಡಿಸುವ ಕುರಿತು ಕ್ರಮ ಕೈಗೊಂಡಿರುವುದನ್ನು ಮೆಚ್ಚುತ್ತೇವೆ. ಆದರೆ, ಇನ್ನಷ್ಟು ತ್ವರಿತವಾಗಿ ಕ್ರಮ ಜರುಗಿಸುವ ಅಗತ್ಯ ಇದೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ದುಷ್ಯಂತ ದವೆ, ‘ನ್ಯಾಯಮೂರ್ತಿಗಳ ವರ್ಗಾವಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಮಾಡಬಾರದು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಹೇಳುತ್ತಿದ್ದಾರೆ. ತಮಗೆ ಬೇಕಾದವರನ್ನು ಆಯ್ಕೆ ಮಾಡಿ, ‌ವರ್ಗಾವಣೆ ಮಾಡುತ್ತೇವೆ ಎಂಬುದನ್ನೂ ಹೇಳುತ್ತಿದ್ದಾರೆ’ ಎಂದರು.

ಅಲ್ಲದೇ, ಆರ್‌.ಜಾನ್‌ ಸತ್ಯಂ ಅವರನ್ನು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿದ್ದರೂ, ಈ ವರೆಗೆ ಅನುಮೋದನೆ ನೀಡಿಲ್ಲ ಎಂಬುದನ್ನು ವಕೀಲ ದವೆ ಅವರು ನ್ಯಾಯಪೀಠದ ಗಮನಕ್ಕೆ ತಂದರು.

‘ಒಂದು ವೇಳೆ ನಾವು ನಾಲ್ವರ ಹೆಸರನ್ನು ಶಿಫಾರಸು ಮಾಡುತ್ತೇವೆ. ಈ ಬಗ್ಗೆ ನೀವು ಅಧಿಸೂಚನೆಯನ್ನು ಹೊರಡಿಸುತ್ತೀರಿ. ನಾಲ್ವರ ಪೈಕಿ ಒಬ್ಬರ ಹೆಸರನ್ನು ತಡೆಹಿಡಿಯುತ್ತೀರಿ. ಈ ಬಗ್ಗೆ ನೀವು ಏನೂ ಹೇಳಿಲ್ಲ’ ಎಂದು ಜನರಲ್‌ ಸಿಂಗ್‌ ಅವರನ್ನು ಉದ್ದೇಶಿಸಿ ನ್ಯಾಯಪೀಠ ‌ಕೇಳಿತು.

ನಂತರ, ಎರಡೂ ಕಡೆಯವರ ವಾದಗಳನ್ನು ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್‌ 7ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.