ADVERTISEMENT

ಶರ್ಮಿಷ್ಠಾ ಬಂಧನ: ಓಲೈಕೆ ರಾಜಕಾರಣ ಎಂದು ಮಮತಾ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಪಿಟಿಐ
Published 1 ಜೂನ್ 2025, 14:27 IST
Last Updated 1 ಜೂನ್ 2025, 14:27 IST
<div class="paragraphs"><p>BJP</p></div>

BJP

   

ನವದೆಹಲಿ: ಪುಣೆ ಮೂಲದ ಇನ್‌ಸ್ಟಾಗ್ರಾಮ್ ಇನ್‌ಫ್ಲ್ಯೂಯೆನ್ಸರ್ ಶರ್ಮಿಷ್ಠಾ ಪನೋಲಿ ಅವರನ್ನು ಬಂಧಿಸಿರುವ ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ಖಂಡಿಸಿರುವ ಬಿಜೆಪಿ, ‘ತನ್ನ ಮತಬ್ಯಾಂಕ್‌ ಓಲೈಕೆಗಾಗಿ ಟಿಎಂಸಿ ನೇತೃತ್ವದ ಸರ್ಕಾರ ಹಿಂದೂ ಯುವತಿಯನ್ನು ಗುರಿಯಾಗಿಸಿ ಕ್ರಮ ಕೈಗೊಂಡಿದೆ’ ಎಂದು ಭಾನುವಾರ ಟೀಕಿಸಿದೆ.

‘ಪಶ್ಚಿಮ ಬಂಗಾಳ ಸರ್ಕಾರವು ತನ್ನ ಓಲೈಕೆ ರಾಜಕೀಯ ಭಾಗವಾಗಿ ಆಯ್ದ ಪ್ರಕರಣಗಳಿಗೆ ಸಂಬಂಧಿಸಿ ಮಾತ್ರ ಕ್ರಮ ಕೈಗೊಳ್ಳುತ್ತಿದೆ’ ಎಂದು ಬಿಜೆಪಿಯ ಪಶ್ಚಿಮ ಬಂಗಾಳದ ಸಹ ಉಸ್ತುವಾರಿಯಾಗಿರುವ ಅಮಿತ್‌ ಮಾಳವೀಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘22 ವರ್ಷದ ಶರ್ಮಿಷ್ಠಾ ಪನೋಲಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಿಂದ  ವಿಡಿಯೊಗಳನ್ನು ಅಳಿಸಿ ಹಾಕಿದ್ದಾರೆ. ಮೇ 15ರಂದು ಬಹಿರಂಗವಾಗಿ ಕ್ಷಮೆಯನ್ನೂ ಕೇಳಿದ್ದರೂ ಆಕೆಯನ್ನು ಬಂಧಿಸಿ, 14 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಮಾಳವೀಯಾ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಆಪರೇಷನ್‌ ಸಿಂಧೂರ’ ಕುರಿತು ಬಾಲಿವುಡ್‌ ನಟ–ನಟಿಯರು ಮೌನವಹಿಸಿದ್ದರು ಎಂದು ಟೀಕಿಸಿದ್ದ ಶರ್ಮಿಷ್ಠಾ, ಈ ಕುರಿತ ವಿಡಿಯೊ ಅಪ್‌ಲೋಡ್‌ ಮಾಡಿದ್ದರು. ಅವರ ಹೇಳಿಕೆಗಳು ಕೋಮು ಭಾವನೆ ಕೆರಳಿಸುವಂತಿವೆ ಎಂಬ ಆರೋಪದಡಿ ಪಶ್ಚಿಮ ಬಂಗಾಳ ಪೊಲೀಸರು ಮೇ 30ರಂದು ಗುರುಗ್ರಾಮದಲ್ಲಿ ಶರ್ಮಿಷ್ಠಾ ಅವರನ್ನು ಬಂಧಿಸಿದ್ದರು.

ಕೋಲ್ಕತ್ತದ ನ್ಯಾಯಾಲಯವೊಂದು ಅವರನ್ನು ಜೂನ್‌ 13ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

‘ಶರ್ಮಿಷ್ಠಾ ಅವರ ಹೇಳಿಕೆಗಳಿಗೆ ತಳುಕು ಹಾಕುವಂತೆ, ಯಾವ ಕೋಮು ಗಲಭೆಗಳು ವರದಿಯಾಗಿಲ್ಲ. ಆದಾಗ್ಯೂ ಪಶ್ಚಿಮ ಬಂಗಾಳ ಪೊಲೀಸರು ‘ಅಸಾಧಾರಣ ಅವಸರ’ದಿಂದ ಕ್ರಮ ಕೈಗೊಂಡಿದ್ದಾರೆ’ ಎಂದು ಮಾಳವೀಯಾ ಟೀಕಿಸಿದ್ದಾರೆ.

‘ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಅದು ರಾಜಕೀಯ ಅನುಕೂಲಕ್ಕೆ ತಕ್ಕಂತೆ ಇರಬಾರದು. ಈ ಪ್ರಕರಣವನ್ನು ಇಡೀ ದೇಶವೇ ಗಮನಿಸುತ್ತಿದೆ’ ಎಂದು ಪೋಸ್ಟ್‌ ಮಾಡಿದ್ದಾರೆ.

ನ್ಯಾಯಯುತ ಕ್ರಮವಿರಲಿ: ಪವನ್ ಕಲ್ಯಾಣ್

ಅಮರಾವತಿ: ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ವಿಡಿಯೊ ಹಂಚಿಕೊಂಡ ಆರೋಪದಡಿ ಬಂಧಿಸಲಾಗಿರುವ ಪುಣೆ ಮೂಲದ ಶರ್ಮಿಷ್ಠಾ ಪನೋಲಿ ಪ್ರಕರಣದಲ್ಲಿ ‘ನ್ಯಾಯಯುತ’ವಾಗಿ ನಡೆದುಕೊಳ್ಳುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಆಂಧ್ರಪ್ರದೇಶ ಡಿಸಿಎಂ ಪವನ ಕಲ್ಯಾಣ್‌ ಮನವಿ ಮಾಡಿದ್ದಾರೆ. ‘ಧರ್ಮನಿಂದನೆಯನ್ನು ಎಲ್ಲರೂ ಖಂಡಿಸಬೇಕು. ಆದರೆ ಜಾತ್ಯತೀತೆಯನ್ನು ಗುರಾಣಿಯಂತೆ ಬಳಸಬಾರದು’ ಎಂದು ಪ್ರತಿಪಾದಿಸಿದ್ದಾರೆ. ‘ಜಾತ್ಯತೀತತೆ ಎಂಬುದು ಕೆಲವರಿಗೆ ಗುರಾಣಿಯಂತೆ ಹಾಗೂ ಇತರರಿಗೆ ಖಡ್ಗದಂತೆ ಆಗಬಾರದು. ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಪಶ್ಚಿಮ ಬಂಗಾಳ ಪೊಲೀಸರೇ ಇಡೀ ದೇಶವೇ ಗಮನಿಸುತ್ತಿದೆ. ಎಲ್ಲರ ಜೊತೆ ನ್ಯಾಯಯುತವಾಗಿ ನಡೆದುಕೊಳ್ಳಿ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.