
ಚೆನ್ನೈ (ಪಿಟಿಐ): ಎಐಎಡಿಎಂಕೆ ಪಕ್ಷದಿಂದ 9 ಬಾರಿ ಶಾಸಕರಾಗಿದ್ದ ಕೆ.ಎ.ಸೆಂಗೋಟಯ್ಯನ್ ಅವರು ಗುರುವಾರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ಖ್ಯಾತ ನಟ ವಿಜಯ್ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾದರು. ಬುಧವಾರವಷ್ಟೇ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಮಾಜಿ ಸಂಸದೆ ವಿ.ಸತ್ಯಭಾಮ ಜೊತೆಗೂಡಿ ತಮ್ಮ ಅಪಾರ ಬೆಂಬಲಿಗರ ಜೊತೆಗೆ ಇಲ್ಲಿನ ಪನೈಯೂರ್‌ನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಟಿವಿಕೆ ಸೇರಿದರು.
ತಮಿಳುನಾಡಿನ ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿಯಾಗಿರುವ ಸೆಂಗೋಟಯ್ಯನ್ ಅವರು ಎಂಜಿಆರ್ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. 50 ವರ್ಷ ರಾಜಕೀಯ ಅನುಭವ ಹೊಂದಿರುವ ಅವರು ಎಐಎಡಿಎಂಕೆ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. 1972ರಲ್ಲಿ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ. ಕರುಣಾನಿಧಿ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಪಕ್ಷ ತೊರೆದಿದ್ದರು.
ಸೆಂಗೋಟಯ್ಯನ್ ಸೇರ್ಪಡೆಯಿಂದ ಕೊಂಗು ಪ್ರದೇಶದಲ್ಲಿ ಟಿವಿಕೆ ಪಕ್ಷದ ಬಲವರ್ಧನೆಯಾಗಲಿದೆ ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಈರೋಡ್ ಜಿಲ್ಲೆಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಭಾವ ಬೀರಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಕೊಯಮತ್ತೂರು ಹಾಗೂ ಈರೋಡ್ ಜಿಲ್ಲೆ ಹೊಂದಿರುವ ತಮಿಳುನಾಡಿವ ಪಶ್ಚಿಮ ಭಾಗವನ್ನು ‘ಕೊಂಗು’ ಪ್ರದೇಶವೆಂದು ಕರೆಯಲಾಗುತ್ತದೆ.
ಎಐಎಡಿಎಂಕೆಯಿಂದ ಉಚ್ಚಾಟಿತಗೊಂಡಿದ್ದ ಪನ್ನೀರ್ ಸೆಲ್ವಂ, ಟಿಟಿವಿ ದಿನಕರನ್, ವಿ.ಕೆ.ಶಶಿಕಲಾ ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಅವರೆಲ್ಲರನ್ನು ಭೇಟಿಯಾಗಿ ಸೆಂಗೋಟಯ್ಯನ್ ಮಾತುಕತೆ ನಡೆಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಪಳನಿಸ್ವಾಮಿ ಅವರು ಅಕ್ಟೋಬರ್ 31ರಂದು ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.
- ಸೆಂಗೋಟಯ್ಯನ್ ಅವರ ನಿರ್ಧಾರದಿಂದ ನಮ್ಮ ಮೈತ್ರಿಕೂಟಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಎಷ್ಟು ಮೈತ್ರಿಕೂಟ ರಚನೆಯಾಗುತ್ತದೆಯೋ ಎಂಬುದು ಮುಖ್ಯವಲ್ಲ 2026ರಲ್ಲಿ ನಮ್ಮ ಮೈತ್ರಿಕೂಟವೇ ಅಧಿಕಾರ ಹಿಡಿಯಲಿದೆನೈನಾರ್ ನಾಗೇಂದ್ರನ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಸೆಂಗೋಟಯ್ಯನ್ ಅವರು ಎಐಎಡಿಎಂಕೆ ಪಕ್ಷದಲ್ಲಿ ಇರಲಿಲ್ಲ. ಹೀಗಾಗಿ ಅವರು ಟಿವಿಕೆ ಸೇರ್ಪಡೆ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲಪಳನಿಸ್ವಾಮಿ ಎಐಎಡಿಎಂಕೆ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.