ADVERTISEMENT

ರೈತರ ಪ್ರತಿಭಟನೆ: ನಡ್ಡಾ ನಿವಾಸದಲ್ಲಿ ಬಿಜೆಪಿ ಹಿರಿಯ ನಾಯಕರ ಸಭೆ

ಏಜೆನ್ಸೀಸ್
Published 1 ಡಿಸೆಂಬರ್ 2020, 7:05 IST
Last Updated 1 ಡಿಸೆಂಬರ್ 2020, 7:05 IST
ನಡ್ಡಾ ನಿವಾಸದಲ್ಲಿ ನಡೆಯುತ್ತಿರುವ ಸಭೆಗೆ ಬಿಜೆಪಿ ನಾಯಕರ ಆಗಮನ – ಎಎನ್ಐ ಚಿತ್ರ
ನಡ್ಡಾ ನಿವಾಸದಲ್ಲಿ ನಡೆಯುತ್ತಿರುವ ಸಭೆಗೆ ಬಿಜೆಪಿ ನಾಯಕರ ಆಗಮನ – ಎಎನ್ಐ ಚಿತ್ರ   

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರವು ರೈತರನ್ನು ನಿಗದಿಗಿಂತ ಎರಡು ದಿನ ಮುಂಚಿತವಾಗಿ ಮಾತುಕತೆಗೆ ಆಹ್ವಾನಿಸಿದ್ದರೂ ದೇಶದ ಎಲ್ಲ ರೈತ ಸಂಘಟನೆಗಳನ್ನು ಚರ್ಚೆಗೆ ಕರೆಯದಿದ್ದರೆ ನಾವು ಬರುವುದಿಲ್ಲ ಎಂದು ಪಂಜಾಬ್ ರೈತ ಸಂಘರ್ಷ ಸಮಿತಿ ಕೇಂದ್ರ ಸರಕಾರಕ್ಕೆ ಈಗಾಗಲೇ ಪ್ರತಿಕ್ರಿಯಿಸಿದೆ.

ಹೀಗಾಗಿ ರೈತರ ಪ್ರತಿಭಟನೆಗೆ ಸಂಬಂಧಿಸಿ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರು ಸಭೆ ನಡೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಹ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಈ ಮಧ್ಯೆ, ರೈತರ ಪ್ರತಿಭಟನೆಯ ಯಶಸ್ಸಿಗಾಗಿ ಗುರುದ್ವಾರಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗಿದೆ ಎಂದು ‘ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ’ಯ ಅಧ್ಯಕ್ಷ ಮಂಜೀಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಲುವಾಗಿ ಅಖಿಲ ಭಾರತ ಕಿಸಾನ್ ಸಭಾವು ಡಿಸೆಂಬರ್ 3ರಂದು ರಸ್ತೆ ತಡೆ ಚಳವಳಿಗೆ ಕರೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.