ADVERTISEMENT

ಪ್ರಧಾನಿಗೆ ಭದ್ರತೆ: ಆರ್‌.ಎ. ಚಂದ್ರಶೇಖರ್ ಮುಖ್ಯಸ್ಥ

ಪಿಟಿಐ
Published 15 ಜೂನ್ 2025, 14:23 IST
Last Updated 15 ಜೂನ್ 2025, 14:23 IST
   

ನವದೆಹಲಿ: ಹಿರಿಯ ಐಪಿಎಸ್‌ ಅಧಿಕಾರಿ ಆರ್‌.ಎ. ಚಂದ್ರಶೇಖರ್ ಅವರನ್ನು ಸಂಪುಟ ಸಚಿವಾಲಯದ ಕಾರ್ಯದರ್ಶಿ (ಭದ್ರತೆ) ಆಗಿ ನೇಮಕ ಮಾಡಲಾಗಿದೆ. ಸದ್ಯ ಅವರು ಗುಪ್ತಚರ ವಿಭಾಗದ ವಿಶೇಷ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಬಗ್ಗೆ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ. ಕಾರ್ಯದರ್ಶಿ (ಭದ್ರತೆ) ಹುದ್ದೆಯಲ್ಲಿ ಹರಿನಾಥ್‌ ಮಿಶ್ರಾ ಕಾರ್ಯನಿರ್ವಹಿಸುತ್ತಿದ್ದು, ಇವರ ಅಧಿಕಾರಾವಧಿಯು ಮುಂದಿನ ತಿಂಗಳು ಕೊನೆಗೊಳ್ಳಲಿದೆ.

ಚಂದ್ರಶೇಖರ್ ಅವರು ಕೇರಳ ಕೇಡರ್‌ನ 1991ನೇ ಬ್ಯಾಚ್‌ನವರು. ಆಗಸ್ಟ್‌ 1ರಿಂದ ಚಂದ್ರಶೇಖರ್‌ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಾರ್ಯದರ್ಶಿಯು (ಭದ್ರತೆ) ಪ್ರಧಾನಿ ಮತ್ತು ಅವರ ಅಧಿಕೃತ ನಿವಾಸದಲ್ಲಿ ವಾಸ ಮಾಡುವ ಅವರ ಕುಟುಂಬ ಸದಸ್ಯರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆಯ ಮುಖ್ಯಸ್ಥರಾಗಿರುತ್ತಾರೆ.

ADVERTISEMENT

ಮತ್ತೊಂದು ಆದೇಶದಲ್ಲಿ, ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ವಿಶೇಷ ಮಹಾನಿರ್ದೇಶಕ ಸುನಿಲ್‌ ಕುಮಾರ್‌ ಝಾ ಅವರನ್ನು ಅಗ್ನಿಶಾಮಕ ದಳ, ಸಾರ್ವಜನಿಕ ರಕ್ಷಣೆ ಮತ್ತು ಗೃಹ ದಳದ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಸುನಿಲ್‌ ಝಾ ಅವರು ಬಿಹಾರ ಕೇಡರ್‌ನ 1993ನೇ ಬ್ಯಾಚ್‌ನವರು. ಈ ಹುದ್ದೆಯಲ್ಲಿ ಸದ್ಯ ವಿವೇಕ್‌ ಶ್ರೀವಾಸ್ತವ್‌ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಜೂನ್‌ 30ಕ್ಕೆ ನಿವೃತ್ತರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.