ADVERTISEMENT

ಕೋವಿಡ್‌: ಸೆಪ್ಟೆಂಬರ್‌ನಲ್ಲೇ 26.21 ಲಕ್ಷ ಪ್ರಕರಣ ಪತ್ತೆ

ಪಿಟಿಐ
Published 1 ಅಕ್ಟೋಬರ್ 2020, 14:59 IST
Last Updated 1 ಅಕ್ಟೋಬರ್ 2020, 14:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿ ಎಂಟು ತಿಂಗಳುಗಳು ಕಳೆದಿವೆ. ಈ ಅವಧಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ 26.21 ಲಕ್ಷ ಪ್ರಕರಣಗಳು ಸೆಪ್ಟೆಂಬರ್‌ನಲ್ಲೇ ದೃಢಪಟ್ಟಿವೆ.

ಕಳೆದ ತಿಂಗಳೊಂದರಲ್ಲೇ 33,390 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಸೆಪ್ಟೆಂಬರ್‌ವೊಂದರಲ್ಲೇ 24.33 ಲಕ್ಷ (ಒಟ್ಟಾರೆ ಗುಣಮುಖರ ಪ್ರಮಾಣದ ಪೈಕಿ ಶೇ.46.15) ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ,ಕೋವಿಡ್‌ನಿಂದ ಅತಿ ಹೆಚ್ಚು ಮಂದಿ ಗುಣಮುಖರಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಬ್ರೆಜಿಲ್‌ ಹಾಗೂ ಅಮೆರಿಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.

ADVERTISEMENT

ಕೋವಿಡ್‌ ಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದ್ದು, ಮೃತರ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ.

ಜನವರಿ 30ರಂದು ಕೇರಳದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಭಾರತದಲ್ಲಿ ವರದಿಯಾದ ಮೊದಲ ಕೋವಿಡ್‌ ಪ್ರಕರಣ ಅದಾಗಿತ್ತು. ನಂತರದ 109 ದಿನಗಳಲ್ಲಿ ಕೇವಲ 1ಲಕ್ಷ ಪ್ರಕರಣಗಳಷ್ಟೇ ದೃಢಪಟ್ಟಿದ್ದವು. ಆಗಸ್ಟ್‌ 7ರ ವೇಳೆಗೆ ಸೋಂಕಿತರ ಸಂಖ್ಯೆಯು 20 ಲಕ್ಷದ ಗಡಿ ದಾಟಿತ್ತು. ನಂತರ ಇದು ಮತ್ತಷ್ಟು ವೇಗ ಪಡೆದುಕೊಂಡಿತ್ತು. ಆಗಸ್ಟ್‌ 23ರಂದು 30 ಲಕ್ಷವಿದ್ದ ಸಂಖ್ಯೆ ಸೆಪ್ಟೆಂಬರ್‌ 5ರ ವೇಳೆಗೆ 40 ಲಕ್ಷಕ್ಕೆ ಏರಿತ್ತು. ನಂತರದ 11 ದಿನಗಳಲ್ಲಿ ಮತ್ತೆ 10 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಸೆ.28ರ ವೇಳೆಗೆ ಸೋಂಕಿತರ ಸಂಖ್ಯೆಯು 60 ಲಕ್ಷದ ಗಡಿ ದಾಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.