
ನವದೆಹಲಿ: ‘ಅಮೆರಿಕದ ಪಾಲಿಗೆ ಭಾರತಕ್ಕಿಂತ ಮುಖ್ಯವಾದ ದೇಶ ಇನ್ನೊಂದಿಲ್ಲ. ಉಭಯ ರಾಷ್ಟ್ರಗಳು ತಮ್ಮ ನಡುವಿನ ವ್ಯಾಪಾರ ಒಪ್ಪಂದ ದೃಢಪಡಿಸಲು ಮಾತುಕತೆಯಲ್ಲಿ ಸಕ್ರಿಯವಾಗಿ ತೊಡಗುತ್ತಿವೆ’ ಎಂದು ಭಾರತದ ನಿಯೋಜಿತ ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ತಿಳಿಸಿದ್ದಾರೆ.
‘ನೈಜ ಸ್ನೇಹಿತರು ಮಾತ್ರ ಭಿನ್ನಾಭಿಪ್ರಾಯ ಹೊಂದಬಹುದು, ಕೊನೆಗೆ ತಮ್ಮ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳುತ್ತಾರೆ’ ಎಂದು ಭಾರತಕ್ಕೆ ಬಂದಿಳಿದ ತಮ್ಮ ಮೊದಲ ಭಾಷಣದಲ್ಲಿ ಮೋದಿ– ಟ್ರಂಪ್ ನಡುವಿನ ಸ್ನೇಹವನ್ನು ಉಲ್ಲೇಖಿಸಿ ಅಭಿಪ್ರಾಯಪಟ್ಟಿದ್ದಾರೆ.
‘ಭಾರತವು ಜಗತ್ತಿನ ಅತಿ ದೊಡ್ಡ ದೇಶವಾಗಿದೆ. ಆದ್ದರಿಂದ ಅಂತಿಮ ಗೆರೆಯನ್ನು ದಾಟುವುದು ಸುಲಭವಲ್ಲ. ಆದರೂ, ಅದನ್ನು ದಾಟಲು ಯತ್ನಿಸುತ್ತಿದ್ದೇವೆ’ ಎಂದು ಸೋಮವಾರ ಇಲ್ಲಿನ ರಾಯಭಾರ ಕಚೇರಿಯ ನೌಕರರನ್ನು ಉದ್ದೇಶಿಸಿ ಹೇಳಿದ್ದಾರೆ.
ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಾನು ಇಡೀ ವಿಶ್ವದಾದ್ಯಂತ ಪ್ರಯಾಣ ಬೆಳೆಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಟ್ರಂಪ್ ಸ್ನೇಹವು ನೈಜವಾದದ್ದು ಎಂದು ದೃಢಪಡಿಸುತ್ತೇನೆ– ಸರ್ಗಿಯೊ ಗೋರ್, ಭಾರತದ ನಿಯೋಜಿತ ಅಮೆರಿಕ ರಾಯಭಾರಿ
‘ನಮ್ಮ ಸಂಬಂಧದಲ್ಲಿ ವ್ಯಾಪಾರವೇ ಅತಿ ಮುಖ್ಯವಾದ ವಿಚಾರ. ಉಳಿದಂತೆ ಇನ್ನಿತರ ಕ್ಷೇತ್ರಗಳಾದ ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ, ತಂತ್ರಜ್ಞಾನ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿಯೂ ನಾವು ಜೊತೆಗೂಡಿ ಕೆಲಸ ಮಾಡಲಿದ್ದೇವೆ’ ಎಂದು ಸರ್ಗಿಯೊ ತಿಳಿಸಿದ್ದಾರೆ.
ಭಾರತವು ‘ಫಾಕ್ಸ್ ಸಿಲಿಕಾ ಒಕ್ಕೂಟ’ದ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಲಿದೆ ಎಂದು ಗೋರ್ ಘೋಷಿಸಿದ್ದಾರೆ.
‘ಈ ರಾಷ್ಟ್ರಗಳ ಗುಂಪಿಗೆ ಸೇರಲು ಭಾರತವನ್ನು ಆಹ್ವಾನಿಸುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಭಾರತವು ಮುಂದಿನ ತಿಂಗಳ ವೇಳೆಗೆ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಲಿದೆ’ ಎಂದು ಇದೇ ವೇಳೆ ತಿಳಿಸಿದ್ದಾರೆ.
ಸುರಕ್ಷಿತ, ಸಮೃದ್ಧ ಹಾಗೂ ನಾವೀನ್ಯ ಆಧಾರಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ದೃಢಪಡಿಸುವ ನಿಟ್ಟಿನಲ್ಲಿ ಅಮೆರಿಕ ನೇತೃತ್ವದಲ್ಲಿ ‘ಫಾಕ್ಸ್ ಸಿಲಿಕಾ ಒಕ್ಕೂಟ’ ಸ್ಥಾಪನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.