ADVERTISEMENT

ರಾಜೀವ್‌ ಹತ್ಯೆ ಬಳಿಕ ಗೃಹ ಸಚಿವ ಸ್ಥಾನ ಬಯಸಿದ್ದ ಶೇಷನ್‌

ಗೋಪಾಲಕೃಷ್ಣ ಗಾಂಧಿ ಅವರ ಹೊಸ ಪುಸ್ತಕದಲ್ಲಿ ಉಲ್ಲೇಖ

ಪಿಟಿಐ
Published 17 ಏಪ್ರಿಲ್ 2025, 14:11 IST
Last Updated 17 ಏಪ್ರಿಲ್ 2025, 14:11 IST
ಗೋಪಾಲ್‌ಕೃಷ್ಣ ಗಾಂಧಿ
ಗೋಪಾಲ್‌ಕೃಷ್ಣ ಗಾಂಧಿ   

ನವದೆಹಲಿ: ‘1991ರ ಮೇ 21ರಂದು ರಾಜೀವ್‌ ಗಾಂಧಿ ಹತ್ಯೆಯಾದ ತಕ್ಷಣವೇ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಪ್ರಸ್ತಾಪ ಮುಂದಿಟ್ಟಿದ್ದ ಆಗಿನ ಚುನಾವಣಾ ಮುಖ್ಯ ಆಯುಕ್ತ ಟಿ.ಎನ್‌. ಶೇಷನ್‌ ಅವರು ಕೇಂದ್ರದ ಗೃಹ ಸಚಿವರಾಗಲು ಬಯಸಿದ್ದರು’ ಎಂದು ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲ್‌ ಕೃಷ್ಣ ಗಾಂಧಿ ಅವರು ತಮ್ಮ ಹೊಸ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ನಡೆದ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ ರಾಜೀವ್‌ ಗಾಂಧಿ ಅವರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಆರ್‌.ವೆಂಕಟರಾಮನ್‌ ಅವರಿಗೆ ಗೋಪಾಲ್‌ ಕೃಷ್ಣ ಗಾಂಧಿ ಅವರು ಜಂಟಿ ಕಾರ್ಯದರ್ಶಿಯಾಗಿದ್ದರು. ನಂತರ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. 

ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಬುಧವಾರ ಗೋಪಾಲ್‌ಗಾಂಧಿ ಅವರ ‘ಅಮರ ಬೆಳಕು: ಸ್ವಾತಂತ್ರ್ಯ ಭಾರತದ ವೈಯಕ್ತಿಕ ಇತಿಹಾಸ’ ಪುಸ್ತಕವನ್ನು ನಟಿ ಶರ್ಮಿಳಾ ಠಾಗೋರ್‌ ಬಿಡುಗಡೆಗೊಳಿಸಿದರು. ಈ ‍ಪುಸ್ತಕದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. 

ADVERTISEMENT

‘ರಾಜೀವ್‌ ಅವರ ಹತ್ಯೆಯನ್ನು ಶೇಷನ್‌ ಅವರೇ ರಾಷ್ಟ್ರಪತಿ ವೆಂಕಟರಾಮನ್‌, ರಾಷ್ಟ್ರಪತಿಗಳ ಕಾರ್ಯದರ್ಶಿ ಪಿ.ಮುರಾರಿ ಅವರಿಗೆ ಮೊದಲು ತಿಳಿಸಿದ್ದರು. ಆ ರಾತ್ರಿ ಅತ್ಯಂತ ವೇಗದಲ್ಲಿ ಬಂದು ಅವಸರದಲ್ಲಿಯೇ ಪಿಸುಗುಟ್ಟಿ ಈ ಮಾಹಿತಿ ನೀಡಿದರು. ಈ ವೇಳೆ ನಾನು ಅಲ್ಲಿಯೇ  ಹಾಜರಿದ್ದೆ’ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

‘ದೇಶದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂಬ ಆಗ್ರಹವನ್ನು ಶೇಷನ್‌ ಮುಂದಿಟ್ಟರು. ಆ ಮೂಲಕ ಮುಖ್ಯ ಚುನಾವಣಾ ಆಯುಕ್ತ ಕಚೇರಿ ಮೀರಿ ಪಾತ್ರ ನಿರ್ವಹಿಸಲು ಸಿದ್ಧರಾಗಿದ್ದರು. ಒಂದೊಮ್ಮೆ ರಾಷ್ಟ್ರಪತಿಗಳಿಗೆ ಮನವರಿಕೆಯಾದರೆ, ದೇಶದ ಗೃಹ ಸಚಿವ ಸ್ಥಾನವನ್ನು ನಿಭಾಯಿಸಲು ಶೇಷನ್‌ ಸಿದ್ಧರಾಗಿದ್ದರು’ ಎಂದು ಉಲ್ಲೇಖಿಸಿದ್ದಾರೆ. 

‘ಶೇಷನ್‌ ಅವರ ಸಲಹೆಗಳನ್ನು ಸರ್ಕಾರ ಪರಿಗಣಿಸಿರಲಿಲ್ಲ. ಆಗಿನ ಪ್ರಧಾನಿ ಚಂದ್ರಶೇಖರ್‌ ಹಾಗೂ ಸಂಪುಟ ಕಾರ್ಯದರ್ಶಿಯಾಗಿದ್ದ ನರೇಶ್‌ ಚಂದ್ರ ಅವರು ಕೂಡ ರಾಷ್ಟ್ರಪತಿಯವರನ್ನು ಭೇಟಿಯಾಗಿ, ‘ಬಿಕ್ಕಟ್ಟು ಎದುರಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕಾದ ಅಗತ್ಯವಿಲ್ಲ’ ಎಂದು ಮನವರಿಕೆ ಮಾಡಿಕೊಟ್ಟಿದ್ದರು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.