ADVERTISEMENT

ಸಂಸತ್‌ ಅಧಿವೇಶನ: ಬಾಹ್ಯಾಕಾಶ ಕಾರ್ಯಕ್ರಮದ ಚರ್ಚೆ

ಎಸ್‌ಐಆರ್‌ ಚರ್ಚೆಗೆ ಪ್ರತಿಪಕ್ಷಗಳ ಬಿಗಿಪಟ್ಟು

ಶೆಮಿನ್ ಜಾಯ್‌
Published 17 ಆಗಸ್ಟ್ 2025, 20:12 IST
Last Updated 17 ಆಗಸ್ಟ್ 2025, 20:12 IST
ಸಂಸತ್‌ ಭವನ–ಪಿಟಿಐ ಚಿತ್ರ
ಸಂಸತ್‌ ಭವನ–ಪಿಟಿಐ ಚಿತ್ರ   

ನವದೆಹಲಿ: ಅಲ್ಪಾವಧಿಯ ವಿರಾಮದ ನಂತರ, ಸಂಸತ್‌ ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಸಂಘರ್ಷ ಕರಗುವ ಸಾಧ್ಯತೆಗಳು ಕಾಣುತ್ತಿಲ್ಲ. ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿಷಯದ ಕುರಿತು ಸಂಸತ್ತಿನಲ್ಲಿ ಚರ್ಚಿಸಬೇಕೆಂಬ ಪ್ರತಿಪಕ್ಷಗಳ ಆಗ್ರಹವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಕುರಿತು ಲೋಕಸಭೆಯಲ್ಲಿ ಸೋಮವಾರ ವಿಶೇಷ ಚರ್ಚೆ ನಡೆಸಲು ಸರ್ಕಾರ ಪಟ್ಟಿ ಮಾಡಿದೆ.

ಸಂಸತ್‌ನ ಮಳೆಗಾಲದ ಅಧಿವೇಶನವು ಮಂಗಳವಾರ ಮುಂದೂಡಿಕೆಯಾಗಿತ್ತು. ಸೋಮವಾರದಿಂದ ಮತ್ತೆ ಆರಂಭಗೊಳ್ಳಲಿದ್ದು, ಆಗಸ್ಟ್‌ 21ರಂದು ಮುಕ್ತಾಯವಾಗಲಿದೆ. ಅದೇ ದಿನ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿದೆ. ಜುಲೈ 21ರಂದು ಆರಂಭಗೊಂಡ ಅಧಿವೇಶನದ ಮೊದಲ ದಿನವೇ ಅನಾರೋಗ್ಯದ ಕಾರಣ ನೀಡಿ, ಜಗದೀಪ್‌ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಕೊನೆಯ ನಾಲ್ಕು ದಿನಗಳ ಅಧಿವೇಶನದಲ್ಲಿ ‘ಇಂಡಿಯಾ’ ಒಕ್ಕೂಟವು ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ. ಅಭ್ಯರ್ಥಿ ಅಂತಿಮಗೊಂಡರೆ, ಬಳಿಕ ತೆಗೆದುಕೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಒಕ್ಕೂಟದ ಮುಖಂಡರು ಚರ್ಚೆ ನಡೆಸಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.