ADVERTISEMENT

ಸೇತುವೆಯಿಂದ ಬಿದ್ದ ಎಸ್‌ಯುವಿ: 7 ವೈದ್ಯವಿದ್ಯಾರ್ಥಿಗಳ ಸಾವು

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಅಪಘಾತ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 12:41 IST
Last Updated 25 ಜನವರಿ 2022, 12:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಸೆಲ್ಸುರಾ ಎಂಬಲ್ಲಿ ಸೇತುವೆಯಿಂದ ಎಸ್‌ಯುವಿಯೊಂದು ಬಿದ್ದ ಪರಿಣಾಮ ಮಂಗಳವಾರ ಏಳು ಜನ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ವಿಷ್ಕರ್‌ ರಹಾಂಗಡಾಲೆ ಹಾಗೂ ಉತ್ತರ ಪ್ರದೇಶದವರಾದ ನೀರಜ್‌ ಚೌಹಾಣ್‌, ಪ್ರತ್ಯುಷ್‌ ಸಿಂಗ್, ಶುಭಂ ಜೈಸ್ವಾಲ್‌, ಬಿಹಾರ ಮೂಲದ ವಿವೇಕ್‌ ನಂದನ್‌ ಮತ್ತು ಪವನ್ ಶಕ್ತಿ ಹಾಗೂ ಒಡಿಶಾದ ನಿತೀಶ್‌ಕುಮಾರ್‌ ಸಿಂಗ್ ಮೃತಪಟ್ಟವರು.

ವಿಷ್ಕರ್, ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ತಿರೋಡಾ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್‌ ರಹಾಂಗಡಾಲೆ ಅವರ ಪುತ್ರ.

ADVERTISEMENT

‘ಮೃತರೆಲ್ಲರೂ ವಾರ್ಧಾದ ಜವಾಹರಲಾಲ್‌ ನೆಹರೂ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳು. ಈ ಅಪಘಾತ ಮಧ್ಯರಾತ್ರಿ ಸಂಭವಿಸಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಾಂತ್‌ ಹೋಳ್ಕರ್ ತಿಳಿಸಿದ್ದಾರೆ.

‘ಯವತ್‌ಮಾಲ್‌ ಜಿಲ್ಲೆಯಲ್ಲಿ ನಡೆದ ಸಹಪಾಠಿಯೊಬ್ಬರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮರಳುವಾಗ ಈ ಅಪಘಾತ ಸಂಭವಿಸಿದೆ. ವಿದ್ಯಾರ್ಥಿಯೊಬ್ಬ ವಾಹನ ಚಲಾಯಿಸುತ್ತಿದ್ದ’ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಶೋಕ: ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಸಾವಿಗೆ ಶೋಕಿಸಿದ್ದಾರೆ.

‘ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರ ಕುಟುಂಬಕ್ಕೆ ₹ 50,000 ಪರಿಹಾರಧನ ನೀಡುವುದಾಗಿ’ ಪ್ರಧಾನಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.