ಹಲ್ಲೆ
(ಪ್ರಾತಿನಿಧಿಕ ಚಿತ್ರ)
ಮುಂಬೈ: ಪವನ ವಿದ್ಯುತ್ ತಯಾರಿಕೆ ಕಂಪನಿಯಿಂದ ಹಣ ಸುಲಿಗೆಗೆ ಅಡ್ಡಿಯಾಗಿದ್ದರು ಎಂದೇ ಸರಪಂಚ್ ಸಂತೋಷ್ ದೇಶಮುಖ್ ಅವರನ್ನು ಆರೋಪಿಗಳು ಅಪಹರಿಸಿ, ಗಂಟೆಗಟ್ಟಲೆ ಕಿರುಕುಳ ನೀಡಿದ್ದರು.
‘ಗ್ಯಾಸ್ ಪೈಪ್, ಕಬ್ಬಿಣದ ಸರಳು ಮತ್ತು ಮರದ ಪಟ್ಟಿಗಳಿಂದ ತೀವ್ರವಾಗಿ ಹಲ್ಲೆ ಮಾಡಿರುವ ಹಾಗೂ ಕಿರುಕುಳ ಕೃತ್ಯವನ್ನು 15 ವಿಡಿಯೊಗಳಲ್ಲಿ ಚಿತ್ರೀಕರಿಸಿದ್ದರು. ಎರಡು ಬಾರಿ ವಿಡಿಯೊ ಕರೆ ಮಾಡಿದ್ದರು’ ಎಂದು ಪೊಲೀಸರು ಸಲ್ಲಿಸಿರುವ ಅರೋಪಪಟ್ಟಿಯ ವಿವರಗಳನ್ನು ಆಧರಿಸಿ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ದೇಶಮುಖ್ ಅವರನ್ನು ಅರೆನಗ್ನಗೊಳಿಸಿ ಮರದ ಪಟ್ಟಿ, ಪೈಪ್‌ನಿಂದ ಹಲ್ಲೆ ಮಾಡಿರುವ ದೃಶ್ಯ ಒಂದು ವಿಡಿಯೊದಲ್ಲಿ ಇದ್ದರೆ, ಮತ್ತೊಂದು ವಿಡಿಯೊದಲ್ಲಿ ಹಲ್ಲೆಯಿಂದಾಗಿ ರಕ್ತಸ್ರಾವವಾಗುತ್ತಿದ್ದ ಗಾಯಗಳ ಮೇಲೆ ಮೂತ್ರವಿಸರ್ಜನೆ ಮಾಡಿರುವ ದೃಶ್ಯವಿದೆ.
ಆರೋಪಪಟ್ಟಿ ಪ್ರಕಾರ, ಬೀಡ್ ಜಿಲ್ಲೆ ಮಸಾಜೋಗ್ ಗ್ರಾಮದಲ್ಲಿ ಸ್ಥಾಪನೆ ಆಗಿದ್ದ ಪವನ ವಿದ್ಯುತ್ ಉತ್ಪಾದನೆ ಕಂಪನಿಯಿಂದ ₹2 ಕೋಟಿ ಸುಲಿಗೆ ಮಾಡಲು ಆರೋಪಿಗಳು ಯತ್ನಿಸಿದ್ದು, ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ, ಕಂಪನಿಯನ್ನು ಮುಚ್ಚಿಸಲಾಗುವುದು ಎಂದು ಬೆದರಿಕೆಯೊಡ್ಡಿದ್ದರು.
ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಹಿಂದೆಯೇ ಕಂಪನಿಯ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದರು. ‘ಹಣ ಸುಲಿಗೆಯ ಬೆದರಿಕೆಯಿಂದ ಕಂಪನಿ ಮುಚ್ಚಿದರೆ, ಸ್ಥಳೀಯರು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಭಾವಿಸಿದ ಅಲ್ಲಿನ ಗ್ರಾಮ ಪಂಚಾಯಿತಿಯ ಸರಪಂಚ್ ದೇಶಮುಖ್ ಸುಲಿಗೆ ತಡೆಯಲು ಮುಂದಾಗಿದ್ದರು.
ಇದೇ ಕಾರಣದಿಂದಲೇ ಅವರನ್ನು ಅಪಹರಿಸಿದ್ದ ಆರೋಪಿಗಳು, ಹಿಂಸೆ ಕೊಟ್ಟಿದ್ದರು. ಇದು, ಅಂತಿಮವಾಗಿ ದೇಶಮುಖ್ ಕೊಲೆಯಲ್ಲಿ ಅಂತ್ಯಗೊಂಡಿತ್ತು ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಡೊಂಗಾವ್ ಟೋಲ್ ಪ್ಲಾಜಾದಿಂದ ಡಿ.9ರಂದು ದೇಶಮುಖ್ ಅವರನ್ನು ಆರು ಮಂದಿಯ ತಂಡ ಅಪಹರಿಸಿತ್ತು. ನಂತರ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ದೈತಾನಾ ಶಿವಾರದ ಬಳಿ ಅವರು ಪತ್ತೆಯಾಗಿದ್ದರು. ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಮೃತಪಟ್ಟಿದ್ದರು.
ಬೀಡ್ ಜಿಲ್ಲೆಯಲ್ಲಿ ತನ್ನದೇ ಪಾರುಪತ್ಯ ಹೊಂದಲು ಮುಖ್ಯ ಆರೋಪಿ ಕರಡ್ ತನ್ನದೇ ಗ್ಯಾಂಗ್ ರಚಿಸಿಕೊಂಡಿದ್ದ ಎಂದು ಪಿಟಿಐ ಆರೋಪಪಟ್ಟಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.