ADVERTISEMENT

ಲೈಂಗಿಕ ಸಿ.ಡಿ ಪ್ರಕರಣ: ಛತ್ತೀಸಗಡ ಸರ್ಕಾರವೂ ಪ್ರತಿವಾದಿ

ಸುಪ್ರೀಂ ಕೋರ್ಟ್ ಅವಕಾಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 9:45 IST
Last Updated 11 ಫೆಬ್ರುವರಿ 2021, 9:45 IST
ಭೂಪೇಶ್‌ ಬಘೇಲ್‌
ಭೂಪೇಶ್‌ ಬಘೇಲ್‌   

ನವದೆಹಲಿ: ಲೈಂಗಿಕ ಸಿ.ಡಿಗೆ ಸಂಬಂಧಿಸಿದ ಪ್ರಕರಣದಲ್ಲಿ ಛತ್ತೀಸಗಡ ಸರ್ಕಾರವನ್ನು ಸಹ ಪ್ರತಿವಾದಿಯನ್ನಾಗಿ ಮಾಡಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದೆ.

ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

‘ಛತ್ತೀಸಗಡ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ. ಹೀಗಾಗಿ, ಈ ಪ್ರಕರಣವು ಸರ್ಕಾರಕ್ಕೂ ಸಂಬಂಧಿಸಿದೆ ಎನ್ನುವುದನ್ನು ಪರಿಗಣಿಸಿ ಪ್ರತಿವಾದಿಯನ್ನಾಗಿ ಮಾಡಬೇಕು’ ಎಂದು ಸಹ ಆರೋಪಿ ಕೈಲಾಷ್‌ ಮುರಾಕ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಆರ್‌.ಎಸ್‌. ರೆಡ್ಡಿ ಅವರನ್ನೊಳಗೊಂಡ ಪೀಠವು, ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಲು ಅವಕಾಶ ಕಲ್ಪಿಸಿತು.

ADVERTISEMENT

ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿದರೆ ತಮಗೆ ಯಾವುದೇ ಆಕ್ಷೇಪ ಇಲ್ಲ ಎಂದು ಸಿಬಿಐ ಪರ ಹಾಜರಾಗಿದ್ದ ಸಾಲಿಸಿಟರ್‌‌ ಜನರಲ್‌ ತುಷಾರ್‌ ಮೆಹ್ತಾ ವಿಚಾರಣೆ ಸಂದರ್ಭದಲ್ಲಿ ಹೇಳಿದರು.

ರಾಜ್ಯ ಸರ್ಕಾರ ಪರ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಮತ್ತು ವಕೀಲ ಸುಮೀರ್‌ ಸೋಧಿ, ಈ ವಿಷಯದ ಬಗ್ಗೆ ನೀಡಲಾದ ನೋಟಿಸ್‌ ಸ್ವೀಕರಿಸಿದರು.

ಕೆಲವು ಸಾಕ್ಷಿದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ರಾಜ್ಯದ ಮುಖ್ಯಮಂತ್ರಿ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದು, ಪ್ರಭಾವಿ ವ್ಯಕ್ತಿಯಾಗಿದ್ದಾರೆ ಎಂದು ಸಿಬಿಐ ಜನವರಿ 18ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ಕೆಲವು ಸಾಕ್ಷಿದಾರರು ದೆಹಲಿ, ಮುಂಬೈ ಸೇರಿದಂತೆ ಬೇರೆ, ಬೇರೆ ಸ್ಥಳಗಳಲ್ಲಿದ್ದಾರೆ. ಹೀಗಾಗಿ, ಈ ಪ್ರಕರಣದ ವಿಚಾರಣೆಯನ್ನು ಛತ್ತೀಸಗಡದಿಂದ ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಸಿಬಿಐ ಕೋರಿದೆ.

2017ರಲ್ಲಿ ಛತ್ತೀಸಗಡ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದ ಬಘೇಲ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ನಕಲಿ ಲೈಂಗಿಕ ಸಿ.ಡಿ. ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ಹಿಂದಿನ ಲೋಕೋಯೋಗಿ ಸಚಿವ ಮತ್ತು ಬಿಜೆಪಿ ನಾಯಕ ರಾಜೇಶ್‌ ಮುನಾತ್‌ ಅವರು ಬಘೇಲ್‌ ಮತ್ತು ಹಿರಿಯ ಪತ್ರಕರ್ತ ವಿನೋದ್‌ ವರ್ಮಾ ವಿರುದ್ಧ ದೂರು ಸಲ್ಲಿಸಿದ್ದರು.

ಅಂದಿನ ಬಿಜೆಪಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.