ADVERTISEMENT

MBA ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಚೈತನ್ಯಾನಂದ ನ್ಯಾಯಾಂಗ ಬಂಧನಕ್ಕೆ

ಪಿಟಿಐ
Published 3 ಅಕ್ಟೋಬರ್ 2025, 12:55 IST
Last Updated 3 ಅಕ್ಟೋಬರ್ 2025, 12:55 IST
<div class="paragraphs"><p>MBA ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಚೈತನ್ಯಾನಂದ ನ್ಯಾಯಾಂಗ ಬಂಧನಕ್ಕೆ</p></div>

MBA ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಚೈತನ್ಯಾನಂದ ನ್ಯಾಯಾಂಗ ಬಂಧನಕ್ಕೆ

   

ನವದೆಹಲಿ: ಶೃಂಗೇರಿ ಶಾರದಾ ಪೀಠಕ್ಕೆ ಸೇರಿರುವ ದೆಹಲಿಯಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಮ್ಯಾನೇಜ್‌ಮೆಂಟ್‌ನ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ, ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ (62 ವಯಸ್ಸು) ಅವರನ್ನು ದೆಹಲಿ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ದೆಹಲಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅನೀಮೇಶ್ ಕುಮಾರ್ ಅವರು ಈ ಆದೇಶ ಹೊರಡಿಸಿದರು,

ADVERTISEMENT

ಏತನ್ಮಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ಪೊಲೀಸರು ಮ್ಯಾನೇಜ್‌ಮೆಂಟ್‌ನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಚೈತನ್ಯಾನಂದ ಅವರ ಮೂವರು ಮಹಿಳಾ ಸಹಾಯಕಿಯರನ್ನು ಬಂಧಿಸಿದ್ದಾರೆ.

ಸಹಾಯಕಿಯರು ವಿದ್ಯಾರ್ಥಿನಿಯರನ್ನು ಬೆದರಿಸಿದ್ದರು. ಅಲ್ಲದೆ, ಸರಸ್ವತಿ ಅವರು ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ಅಳಿಸಿಹಾಕುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರಿದ್ದರು ಎಂದು ಹೇಳಿದ್ದಾರೆ.

ಪೊಲೀಸರ ತಂಡವು ಚೈತನ್ಯಾನಂದ ಅವರು ಆಗ್ರಾದ ಹೋಟೆಲ್‌ನಲ್ಲಿ ತಂಗಿದ್ದನ್ನು ಪತ್ತೆಹಚ್ಚಿ ಬಂಧಿಸಿತ್ತು. ಚೈತನ್ಯಾನಂದ ವಿರುದ್ಧ ಆಗಸ್ಟ್‌ 4ರಂದು ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ಆಶ್ರಮದಿಂದ
ಪರಾರಿಯಾಗಿದ್ದರು.

ಇದಕ್ಕೂ ಮುನ್ನ, ಚೈತನ್ಯಾನಂದ ಅವರ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದ್ದ ₹8 ಕೋಟಿ ಮೊತ್ತವನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು. 

‘ನೈರುತ್ಯ ದೆಹಲಿಯಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಮ್ಯಾನೇಜ್‌ಮೆಂಟ್‌ನ ಮಾಜಿ ಮುಖ್ಯಸ್ಥರಾಗಿದ್ದ ಸರಸ್ವತಿ ಅವರ ವಸತಿಗೃಹಕ್ಕೆ ಭೇಟಿ ನೀಡುವಂತೆ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದ್ದರು. ಅಲ್ಲದೇ, ಅವರ ಚಲನವಲನಗಳ ಮೇಲೆ ಮೊಬೈಲ್‌ನ ಮೂಲಕವೇ ನಿಗಾ ಇಡುತ್ತಿದ್ದರು’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

‘ಚೈತನ್ಯಾನಂದ ಅವರು ಬೇರೆ ಬೇರೆ ಹೆಸರಿನಲ್ಲಿ ಬ್ಯಾಂಕ್‌ ಖಾತೆಗಳನ್ನು ತೆರೆದಿದ್ದು, ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ, ₹50 ಲಕ್ಷ ಹಣವನ್ನು ಪಡೆದುಕೊಂಡಿದ್ದರು. ಬ್ಯಾಂಕ್‌ ಖಾತೆ ತೆರೆಯುವ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರು’ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವಸಂಸ್ಥೆ ಹಾಗೂ ಬ್ರಿಕ್ಸ್‌ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವುದಾಗಿ ಮಾಡಿಟ್ಟುಕೊಂಡಿದ್ದ ನಕಲಿ ವಿಸಿಟಿಂಗ್‌ ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.