ADVERTISEMENT

ಬಾಲಕನಿಗೆ ಲೈಂಗಿಕ ಕಿರುಕುಳ: ಕೇರಳದ ನೃತ್ಯ ಶಿಕ್ಷಕನಿಗೆ 52 ವರ್ಷ ಜೈಲು ಶಿಕ್ಷೆ

ಪಿಟಿಐ
Published 28 ಜೂನ್ 2025, 14:17 IST
Last Updated 28 ಜೂನ್ 2025, 14:17 IST
<div class="paragraphs"><p>ಪ್ರಾಧಿನಿಧಿಕ ಚಿತ್ರ</p></div>

ಪ್ರಾಧಿನಿಧಿಕ ಚಿತ್ರ

   

ಐಸ್ಟಾಕ್ ಚಿತ್ರ

ತಿರುವನಂತಪುರ: ಏಳು ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ 46 ವರ್ಷದ ನೃತ್ಯ ನಿರ್ದೇಶಕನಿಗೆ ಕೇರಳ ನ್ಯಾಯಾಲಯವು 52 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ADVERTISEMENT

ಆರು ವರ್ಷಗಳ ಹಿಂದೆ ನಡೆದ ಘಟನೆ ಕುರಿತು ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತಿರುವನಂತಪುರದಲ್ಲಿರುವ ತ್ವರಿತ ಗತಿಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ ಅವರು ಪ್ರಕರಣದ ಆರೋಪಿಯಾಗಿದ್ದ ಸುನಿಲ್ ಕುಮಾರ್‌ ಎಂಬಾತನನ್ನು ಅಪರಾಧಿ ಎಂದು ಪರಿಗಣಿಸಿ 52 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದರು. 

ಜೈಲು ಶಿಕ್ಷೆಯೊಂದಿಗೆ ₹3.25 ಲಕ್ಷ ದಂಡವನ್ನೂ ನ್ಯಾಯಾಲಯ ವಿಧಿಸಿದೆ. ವಸೂಲಿ ಮಾಡಿದ ಹಣವನ್ನು ಸಂತ್ರಸ್ತ ಬಾಲಕನ ಖಾತೆಯಲ್ಲಿ ಇಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

‘ಅಪರಾಧಿಯು ತಾನು ನೃತ್ಯ ಕಲಿಸುತ್ತಿದ್ದ ಸಭಾಂಗಣಕ್ಕೆ ಹೊಂದಿಕೊಂಡಿದ್ದ ಕೋಣೆಯಲ್ಲಿ ಬಾಲಕನೊಂದಿಗೆ 2017ರಿಂದ 2019ರವರೆಗೆ ಹಲವು ಬಾರಿ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದ. ನಂತರ ಬಾಲಕ ತರಗತಿಗೆ ಹೋಗಲು ಹಿಂದೇಟು ಹಾಕುತ್ತಿದ್ದ. ಆದರೆ ನಡೆದ ಘಟನೆಯನ್ನು ಯಾರಿಗೂ ಹೇಳಿರಲಿಲ್ಲ. ಬಾಲಕನ ಕಿರಿಯ ಸೋದರನನ್ನು ಅದೇ ತರಗತಿಗೆ ಕಳಿಸಲು ಪಾಲಕರು ಮುಂದಾದಾಗ, ತನಗಾದ ನೋವನ್ನು ತೋಡಿಕೊಂಡಿದ್ದ. ಇದರಿಂದ ಪ್ರಕರಣ ಬೆಳಕಿಗೆ ಬಂದಿತು’ ಎಂದು ಸರ್ಕಾರಿ ವಕೀಲ ಆರ್.ಎಸ್. ವಿಜಯ ಮೋಹನ್ ತಿಳಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ 17 ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದರು. ವಿಚಾರಣೆ ವೇಳೆ ಇವರೆಲ್ಲರೂ ಇದ್ದರು. ಅಪರಾಧಿ ಸುನೀಲ್ ಕುಮಾರ್ ವಿರುದ್ಧ 12 ವರ್ಷದ ಬಾಲಕನ ಮೇಲೆ ಅತ್ಯಾಚಾರ ನಡೆಸಿದ ಮತ್ತೊಂದು ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.