ADVERTISEMENT

ಕಾಂಗ್ರೆಸ್‌ಗೆ ಅಭಿವೃದ್ಧಿ ಕುರಿತಾದ ಯಾವುದೇ ಅಜೆಂಡಾವಿಲ್ಲ: ಅಮಿತ್ ಶಾ

ಪಿಟಿಐ
Published 4 ಏಪ್ರಿಲ್ 2021, 10:14 IST
Last Updated 4 ಏಪ್ರಿಲ್ 2021, 10:14 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ಸೊರ್ಬೊಗ್(ಅಸ್ಸಾಂ): ಅಸ್ಸಾಂನ ಅಭಿವೃದ್ಧಿಗೆ ಕಾಂಗ್ರೆಸ್ ಯಾವುದೇ ಸ್ಪಷ್ಟವಾದ ಕಾರ್ಯಸೂಚಿಯನ್ನು ಹೊಂದಿಲ್ಲ. ಎನ್‌ಡಿಎನ 'ಡಬಲ್ ಎಂಜಿನ್' ಸರ್ಕಾರವು ರಾಜ್ಯದ ಬೆಳವಣಿಗೆಗೆ ಕೆಲಸ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದರು.

ಅಸ್ಸಾಂನಲ್ಲಿ ಮೂರನೇ ಮತ್ತು ಅಂತಿಮ ಹಂತದ ಚುನಾವಣೆಯ ಪ್ರಚಾರದ ಕೊನೆಯ ದಿನ ಬರಪೇಟ ಜಿಲ್ಲೆಯ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ಆದರೆ ಬಿಜೆಪಿ 'ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್' ಮಂತ್ರವನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಮತ್ತು ಅವರ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಪ್ರವಾಸಿಗರಾಗಿ ಬರುತ್ತಾರೆ ಎಂದು ಆರೋಪಿಸಿದರು.

ನಾನು ಐದು ವರ್ಷಗಳ ಹಿಂದೆ ನಿಮ್ಮ ಬಳಿಗೆ ಬಂದಿದ್ದೆ. ಪ್ರಧಾನ ಮಂತ್ರಿಯವರಲ್ಲಿ ನಂಬಿಕೆಯನ್ನಿಡುವಂತೆ ನಿಮ್ಮನ್ನು ಒತ್ತಾಯಿಸಿದ್ದೆ ಮತ್ತು ನಾವು ಹಿಂಸೆ ಮತ್ತು ಆಂದೋಲನಗಳನ್ನು ಕೊನೆಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಮತ್ತು ಮೋದಿಜಿ ಇದನ್ನು ಖಾತರಿಪಡಿಸಿದ್ದಾರೆ ಮತ್ತು ಈಗ ರಾಜ್ಯವು ಪ್ರಗತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ' ಎಂದು ಹೇಳಿದರು.

ADVERTISEMENT

ಮುಂದಿನ ಅವಧಿಯಲ್ಲಿ ರಾಜ್ಯವನ್ನು ಪ್ರವಾಹ ಮುಕ್ತವಾಗಿಸಲು ಎನ್‌ಡಿಎ ಬದ್ಧವಾಗಿದೆ ಮತ್ತು ಪ್ರಧಾನಿ ಈಗಾಗಲೇ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಎರಡು ಹಂತದ ಚುನಾವಣೆಗಳು ಮುಗಿದಿವೆ. ಈ ಎರಡು ಹಂತಗಳಲ್ಲಿಯೇ ಈಗಾಗಲೇ ಮುಂದಿನ ಸರ್ಕಾರ ರಚಿಸಲು ಬಿಜೆಪಿ ಬಹುಮತ ಸಾಧಿಸಿದೆ ಎಂದು ನಮಗೆ ವಿಶ್ವಾಸವಿದೆ. ನಾನು ನಿಮ್ಮೊಂದಿಗೆ ಮತ್ತೊಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುತ್ತೇನೆ. ಪಶ್ಚಿಮ ಬಂಗಾಳದಲ್ಲೂ ಚುನಾವಣೆಗಳು ನಡೆಯುತ್ತಿವೆ ಮತ್ತು 'ದಿದಿ ಜಾ ರಹೀ ಹೈ ಔರ್ ಬಿಜೆಪಿ ಆ ರಹೀ ಹೈ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಉಲ್ಲೇಖಿಸಿ ದೀದಿ ಹೋಗುತ್ತಿದ್ದಾರೆ ಮತ್ತು ಬಿಜೆಪಿ ಬರುತ್ತಿದೆ) ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೆರೆಯ ರಾಜ್ಯದಲ್ಲಿ ಬಿಜೆಪಿಯು 200ಕ್ಕೂ ಅಧಿಕ ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದರು. ಬಿಜೆಪಿ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದ ಶಾ, ಕಳೆದ ಐದು ವರ್ಷಗಳಲ್ಲಿ ಐತಿಹಾಸಿಕ ಬೋಡೊ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಮತ್ತು 2000ಕ್ಕೂ ಹೆಚ್ಚು ಯುವಕರು ಶರಣಾಗಿ ಮುಖ್ಯವಾಹಿನಿಗೆ ಮರಳಿದ್ದಾರೆ ಎಂದು ಹೇಳಿದರು.

ನೀವು ಹಿಂಸಾಚಾರವನ್ನು ಹರಡುವ ಸರ್ಕಾರ ಅಥವಾ ಅಭಿವೃದ್ಧಿಯನ್ನು ಪಸರಿಸುವ ಡಬಲ್ ಎಂಜಿನ್ ಸರ್ಕಾರವನ್ನು ಬಯಸುವಿರಾ' ಎಂದು ಪ್ರಶ್ನಿಸಿದ ಅವರು, ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿನ ಕಳ್ಳ ಬೇಟೆಗಾರರಿಗೆ ಕಾಂಗ್ರೆಸ್ ಮುಕ್ತ ಅವಕಾಶ ನೀಡಿದೆ ಮತ್ತು ಅವರ ಸರ್ಕಾರ ಮುಂದುವರಿದಿದ್ದರೆ, ಅಸ್ಸಾಂನ ಹೆಮ್ಮೆಯ ಘೇಂಡಾಮೃಗಗಳ ಅಧ್ಯಾಯ ಇತಿಹಾಸವಾಗಿರುತ್ತಿತ್ತು. ಸರ್ಬಾನಂದ ಸೋನೊವಾಲ್ ನೇತೃತ್ವದ ಬಿಜೆಪಿ ಸರ್ಕಾರವು ಕಳ್ಳ ಬೇಟೆಗಾರರನ್ನು ಕಿತ್ತೊಗೆದಿದೆ ಮತ್ತು ಪ್ರಾಣಿಗಳನ್ನು ಅಳಿವಿನಿಂದ ರಕ್ಷಿಸಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.