ADVERTISEMENT

ಶಾಹೀನ್‌ಬಾಗ್‌: ಸಂಧಾನಕ್ಕೆ ‘ಸುಪ್ರೀಂ’ ಸೂಚನೆ

ಪಿಟಿಐ
Published 17 ಫೆಬ್ರುವರಿ 2020, 20:32 IST
Last Updated 17 ಫೆಬ್ರುವರಿ 2020, 20:32 IST
ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ದೃಶ್ಯ –ಪಿಟಿಐ ಚಿತ್ರ
ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ದೃಶ್ಯ –ಪಿಟಿಐ ಚಿತ್ರ   

ನವದೆಹಲಿ: ಶಾಹೀನ್‌ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ಮಾತುಕತೆ ನಡೆಸಿ, ಜನರಿಗೆ ತೊಂದರೆಯಾಗದಂಥ ಬೇರೆ ಯಾವುದಾದರೂ ಸ್ಥಳಕ್ಕೆ ಪ್ರತಿಭಟನೆಯನ್ನು ಸ್ಥಳಾಂತರಿಸಲು ಮನವಿ ಮಾಡುವಂತೆ ವಕೀಲರಾದ ಸಂಜಯ್‌ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಶಾಹೀನ್‌ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಪ್ರತಿಭಟನಕಾರರನ್ನು ತೆರವುಗೊಳಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ವಕೀಲ ಅಮಿತ್‌ ಸಾಹ್ನಿ ಹಾಗೂ ಬಿಜೆಪಿ ಮುಖಂಡ ನಂದಕಿಶೋರ್‌ ಗರ್ಗ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಹಾಗೂ ಕೆ.ಎಂ. ಜೋಸೆಫ್‌ ಅವರ ಪೀಠವು ಈ ಸೂಚನೆಯನ್ನು ನೀಡಿದೆ.

‘ಸಿಎಎ ವಿಚಾರ ಸುಪ್ರೀಂ ಕೋರ್ಟ್‌ ನಲ್ಲಿದೆ, ತೀರ್ಪು ಪ್ರತಿಭಟನಕಾರರ ಪರವಾಗಿ ಅಥವಾ ವಿರುದ್ಧವಾಗಿ ಬರಬಹುದು. ಅವರು ಪ್ರತಿಭಟನೆ ನಡೆ ಸುವುದು ಸಹಜ. ಆದರೆ, ರಸ್ತೆ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಭಟನೆ ನಡೆಸುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂಬುದಷ್ಟೇ ನಮ್ಮ ಕಾಳಜಿ’ ಎಂದು ಕೋರ್ಟ್‌ ಹೇಳಿದೆ.

ADVERTISEMENT

ಸಮನ್ವಯ ಅಗತ್ಯ: ‘ಯಾವುದೇ ಕಾನೂ ನಿನ ವಿರುದ್ಧ ಪ್ರತಿಭಟನೆ ನಡೆಸುವುದು ನಾಗರಿಕರ ಮೂಲಭೂತ ಹಕ್ಕು. ಆದರೆ, ಪ್ರತಿಭಟನೆಯ ಕಾರಣಕ್ಕೆ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟುಮಾಡುವುದು ಕಳವಳಕಾರಿ ವಿಚಾರ. ಇವುಗಳ ಮಧ್ಯೆ ಸಮನ್ವಯ ಸಾಧಿಸುವ ಅಗತ್ಯವಿದೆ’ ಎಂದು ಕೋರ್ಟ್‌ ಹೇಳಿದೆ.

‘ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕವೇ ಪ್ರಜಾಪ್ರಭುತ್ವವು ಮುನ್ನಡೆಯಬೇಕು. ಪ್ರತಿಭಟನೆ ನಡೆ ಸಲು ನೀವು ಇಚ್ಛಿಸುವುದಾದರೆ ಅದನ್ನು ಮುಂದುವರಿಸಿ. ಆದರೆ, ಅದಕ್ಕೆ ಕೆಲವು ಸೀಮಾರೇಖೆಗಳಿವೆ. ನಾಳೆ ಸಮಾಜದ ಇನ್ನೊಂದು ಸಮುದಾಯದವರು ಇನ್ಯಾವುದೋ ರಸ್ತೆಯಲ್ಲಿ ಪ್ರತಿಭಟನೆ ನಡೆಸಬಹುದು... ಪ್ರತಿಭಟನೆಯಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯ’ ಎಂದು ಪೀಠ ಹೇಳಿದೆ.

‘ಯಾವ ತಂತ್ರವೂ ಫಲನೀಡದಿದ್ದರೆ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗುವುದು. ಪ್ರತಿಭಟನಕಾರರ ಮನವೊಲಿಸಲು ಪ್ರತಿಯೊಂದು ಸಂಸ್ಥೆಯೂ ಮಂಡಿಯೂರಿ ಕುಳಿತಿದೆ ಎಂಬ ಸಂದೇಶ ರವಾನೆಯಾಗಬಾರದು’ ಎಂದು ದೆಹಲಿ ಪೊಲೀಸ್‌ ಇಲಾಖೆ ಪರವಾಗಿ ವಾದಿಸಿದ ಸಾಲಿ ಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು. ಸಂಚಾರ ನಿರ್ಬಂಧವನ್ನು ಸಡಿಲಗೊಳಿಸುವ ವಿಚಾರದಲ್ಲಿ ವಿವಿಧ ಸಂಘಟನೆಗಳ ಜತೆ ಮಾತುಕತೆ ನಡೆಯುತ್ತಿದೆ ಎಂದೂ ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠವು, ‘ಯಾವುದೋ ಕಾರಣಗಳಿಂದ ನೀವು ಆ ಕಡೆಗೆ ಹೋಗಿಲ್ಲ. ಯಾವ ಪ್ರಯತ್ನವೂ ಫಲ ನೀಡದಿದ್ದರೆ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿಯನ್ನು ನಿಮಗೇ ವಹಿಸುತ್ತೇವೆ’ ಎಂದಿದೆ.

ಪ್ರತಿಭಟನೆಯ ಕಾರಣದಿಂದ ಕಾಲಿಂದಿ ಕುಂಜ್‌–ಶಾಹೀನ್‌ಬಾಗ್‌ ಮಾರ್ಗ ಮಧ್ಯೆ ಸುಮಾರು 2 ತಿಂಗಳಿಂದ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.