ADVERTISEMENT

3 ಮಕ್ಕಳ ಕೊಲೆ ಆರೋಪಿತನಾದ ತಂದೆಗೆ ಸಿಕ್ಕಿತು 19 ವರ್ಷಗಳ ಬಳಿಕ ನ್ಯಾಯ! ಜೈ ಭೀಮ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2021, 11:05 IST
Last Updated 25 ನವೆಂಬರ್ 2021, 11:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಹಜಾನ್‌ಪುರ್: ಇದೊಂದು ಜೈ ಭೀಮ್ ಸಿನಿಮಾ ಕಥೆ ಹೋಲುವ ಸಂಗತಿ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳದವರ ನಿಟ್ಟುಸಿರು.

ತನ್ನ ಮೂವರು ಮಕ್ಕಳನ್ನು ಸಾಮೂಹಿಕ ಹತ್ಯೆ ಮಾಡಿದ್ದಾನೆಂದು ಆರೋಪಿತನಾಗಿ, ನ್ಯಾಯಾಲಯದಲ್ಲಿ 19 ವರ್ಷಗಳ ಕಾಲ ವಿಚಾರಣೆಗೆ ಗುರಿಯಾಗಿದ್ದ ಸಂತ್ರಸ್ತ ತಂದೆಯ ಕಥೆಯಿದು.

ಈ ಪ್ರಕರಣದಲ್ಲಿ ತೀರ್ಪು ನೀಡಿರುವ ಉತ್ತರ ಪ್ರದೇಶದ ಶಹಜಾನ್‌ಪುರ್ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ, ನಿಜವಾದ ಕೊಲೆಗಾರರಾದ ರಾಜೇಂದ್ರ ಮತ್ತು ನರೇಶ್ಎನ್ನುವರಿಗೆ ಮರಣದಂಡನೆ ನೀಡಿದೆ. ಇನ್ನೊಬ್ಬ ಅಪರಾಧಿಚುಟುಕುನ್ನು ಅಲಿಯಾಸ್ನಾಥ್‌ತುನಾಲ್ ಈಗಾಗಲೇ ಮರಣ ಹೊಂದಿದ್ದಾನೆ.

ADVERTISEMENT

ಅಲ್ಲದೇ ತನಿಖೆಯ ದಾರಿ ತಪ್ಪಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದ ತನಿಖಾಧಿಕಾರಿ ಹೋಶಿಯಾರ್ ಸಿಂಗ್‌ ಹಾಗೂ ಸುಳ್ಳು ಸಾಕ್ಷಿ ನುಡಿದಿದ್ದ ದಿನೇಶ್‌ ಕುಮಾರ್ ಎನ್ನುವರಿಗೆ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿ ನ್ಯಾಯಾಧೀಶ ಸಿದ್ದಾರ್ಥ್ ಕುಮಾರ್ ವಾಘವ್ಆದೇಶ ಮಾಡಿದ್ದಾರೆ.

ಆರೋಪಿತನಾಗಿ 19 ವರ್ಷ ವಿಚಾರಣೆ ಎದುರಿಸಿದ್ದ ಕೊಲೆಯಾದ ಮಕ್ಕಳ ತಂದೆ ಅವದೇಶ್ ಸಿಂಗ್‌ನನ್ನು ನ್ಯಾಯಾಲಯಪ್ರಕರಣದಿಂದ ಖುಲಾಸೆಗೊಳಿಸಿದೆ.

ಏನಿದು ಪ್ರಕರಣ?

ಉತ್ತರ ಪ್ರದೇಶದ ಶಹಜಾನ್‌ಪುರದಲ್ಲಿ 2002 ಅಕ್ಟೋಬರ್ 15 ರಂದು ಅವದೇಶ್ ಸಿಂಗ್ ಹಾಗೂ ಆತನ ಮೂವರು ಹೆಣ್ಣು ಮಕ್ಕಳಾದ ರೋಹಿಣಿ (9) ನಿಶಾ (7) ಸುರಭಿ (6) ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದರು. ಅವದೇಶ್ ಸಿಂಗ್ ಮೇಲೆ ಹಳೇ ದ್ವೇಷ ಕಾರುತ್ತಿದ್ದ ರಾಜೇಂದ್ರ,ಆತನ ಮಗ ನರೇಶ್ ಮತ್ತು ಚುಟುಕುನ್ನು ಎನ್ನುವರು ಅವದೇಶ್ ಕೊಲೆ ಮಾಡಲು ಬಂದೂಕು ತೆಗೆದುಕೊಂಡು ಹೋಗಿದ್ದರು.

ಈ ವೇಳೆ ಗಲಾಟೆ ಸಂಭವಿಸಿದಾಗ ಹಂತಕರು ಮನಸೋ ಇಚ್ಚೆ ಗುಂಡು ಹಾರಿಸಿದ್ದರು. ಇದರಿಂದ ಅವದೇಶ್ ಮಕ್ಕಳಿಗೆ ಗುಂಡು ತಗುಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ಘಟನೆಯಲ್ಲಿ ಅವದೇಶ್ ಸಿಂಗ್ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದರು.

ನಂತರ ಪೊಲೀಸ್ ಅಧಿಕಾರಿಹೋಶಿಯಾರ್ ಸಿಂಗ್ ನೇತೃತ್ವದ ತನಿಖಾ ತಂಡತನಿಖೆ ಮಾಡಿಮೃತ ಮಕ್ಕಳ ತಂದೆ ಅವದೇಶ್‌ ಅವರೇತೀವ್ರ ಬಡತನದಿಂದ ತನ್ನ ಮಕ್ಕಳನ್ನು ಗುಂಡಿಕ್ಕಿ ಕೊಂದಿದ್ದಾರೆಎಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇದಕ್ಕೆ ದಿನೇಶ್ ಕುಮಾರ್ಅವದೇಶ್ ವಿರುದ್ಧ ಸಾಕ್ಷಿ ನುಡಿದಿದ್ದರು.

ಆದರೆ, ಕಾನೂನು ಹೋರಾಟ ಮುಂದುವರೆಸಿದ್ದ ಅವದೇಶ್ 19 ವರ್ಷಗಳ ಬಳಿಕ ತಾನು ನಿರಪರಾಧಿ ಎಂದು ಸಾಬೀತುಪಡಿಸಿದ್ದಾರೆ. ‘ಕೋರ್ಟ್ ತೀರ್ಪಿನಿಂದ ನನಗೆ ನ್ಯಾಯ ಸಿಕ್ಕಿದೆ. ನ್ಯಾಯಾಂಗದ ಮೇಲಿನ ನನ್ನ ನಂಬಿಕೆಸುಳ್ಳಾಗಲಿಲ್ಲ.ನನ್ನ ಮೇಲೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸಿದ್ದ ತನಿಖಾಧಿಕಾರಿ ಹೋಶಿಯಾರ್ ಸಿಂಗ್‌ಗೂ ಮರಣದಂಡನೆಯಾಗಬೇಕು’ಎಂದು ಹೇಳಿರುವುದಾಗಿಜೀ ನ್ಯೂಸ್ ಇಂಡಿಯಾವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.