ಸಾಂದರ್ಭಿಕ ಚಿತ್ರ
ಶ್ರೀನಗರ: ಮೂರು ದಶಕಗಳ ನಂತರ ಜಮ್ಮು ಮತ್ತು ಕಾಶ್ಮೀರದ ಕಾಶ್ಮೀರಿ ಪಂಡಿತ ಸಮುದಾಯವು ಭಾನುವಾರ ಬುಡ್ಗಮ್ ಜಿಲ್ಲೆಯ ಶಾರದಾ ಭವಾನಿ ದೇವಾಲಯವನ್ನು ಪುನಃ ತೆರೆಯಿತು. ಅಪಾರ ಸಂಖ್ಯೆಯ ಸ್ಥಳೀಯ ಮುಸ್ಲಿಂ ಸಮುದಾಯದ ಜನರು ಪಾಲ್ಗೊಳ್ಳುವಿಕೆಯೊಂದಿಗೆ ಆಚರಣೆಗಳು ನಡೆದವು.
1990ರ ದಶಕದ ಆರಂಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆ ಭುಗಿಲೆದ್ದ ನಂತರ ಸ್ಥಳ ತೊರೆದಿದ್ದ ಕಾಶ್ಮೀರಿ ಪಂಡಿತ ಕುಟುಂಬಗಳ ಗುಂಪೊಂದು ತಮ್ಮ ಪೂರ್ವಜರ ಸ್ಥಳಕ್ಕೆ ಮರಳಿತು. ಪ್ರಾಣ ಪ್ರತಿಷ್ಠೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಮಧ್ಯ ಕಾಶ್ಮೀರದ ಬುಡ್ಗಮ್ ಜಿಲ್ಲೆಯ ಇಚ್ಕೂಟ್ ಗ್ರಾಮ ಸಾಕ್ಷಿಯಾಯಿತು.
‘ಇದು ಪಾಕಿಸ್ತಾನದಲ್ಲಿರುವ ಶಾರದಾ ಮಾತಾ ದೇವಾಲಯದ ಒಂದು ಶಾಖೆ ಎಂದು ನಾವು ಹೇಳಬಹುದು. ನಾವು ಬಹಳ ದಿನಗಳಿಂದ ಈ ದೇವಾಲಯವನ್ನು ಮತ್ತೆ ತೆರೆಯಲು ಬಯಸುತ್ತಿದ್ದೆವು. ಸ್ಥಳೀಯ ಮುಸ್ಲಿಮರು ಸಹ ಅದನ್ನು ಬಯಸುತ್ತಿದ್ದರು. ದೇವಾಲಯವನ್ನು ಪುನಃ ತೆರೆಯುವಂತೆ ಅವರು ಹೇಳುತ್ತಿದ್ದರು’ ಎಂದು ಬುಡ್ಗಮ್‌ನ ಶಾರದಾ ಅಸ್ಥಾಪ್ನ ಸಮುದಾಯದ ಅಧ್ಯಕ್ಷ ಸುನಿಲ್ ಕುಮಾರ್ ಭಟ್ ಹೇಳಿದ್ದಾರೆ.
ಪಂಡಿತ ಸಮುದಾಯವು 35 ವರ್ಷಗಳ ನಂತರ ದೇವಾಲಯವನ್ನು ಮತ್ತೆ ತೆರೆದಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಕಾಶ್ಮೀರಿ ಪಂಡಿತರು ದೇವಾಲಯವನ್ನು ತೆರೆದರು. ಹಳೆಯ ದೇವಾಲಯವು ಹಾಳಾಗಿರುವುದರಿಂದ ಹೊಸ ದೇವಾಲಯ ನಿರ್ಮಿಸಲು ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ ಎಂದು ಭಟ್ ಹೇಳಿದ್ದಾರೆ.
ಸ್ಥಳೀಯ ಮುಸ್ಲಿಮರು ನಮ್ಮೊಂದಿಗೆ ಸೇರಿಕೊಂಡಿದ್ದರಿಂದ ಪುನಃ ದೇವಾಲಯದ ಬಾಗಿಲು ತೆರಯಲು ಸಾಧ್ಯವಾಯಿತು. ಕಣಿವೆಯ ಪ್ರಸಿದ್ಧ ಸಂಯೋಜಿತ ಸಂಸ್ಕೃತಿಯನ್ನು ಇದು ಪ್ರತಿಬಿಂಬಿಸುತ್ತದೆ. ಸ್ಥಳೀಯ ಸಮುದಾಯವಿಲ್ಲದೆ, ಇದು ಸಾಧ್ಯವಾಗುತ್ತಿರಲಿಲ್ಲ. ನಾವು ಇಲ್ಲಿಗೆ ಬಂದಾಗ ಕೇವಲ ನಾಲ್ಕು ಜನರಿದ್ದೆವು. ಇಂದು, ಇಡೀ ಗ್ರಾಮವು ನಮ್ಮೊಂದಿಗಿದೆ. ಇದು ಸ್ಥಳೀಯ ಸಮುದಾಯದ ಬೆಂಬಲವನ್ನು ತೋರಿಸುತ್ತದೆ’ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪಂಡಿತ್ ಸಮುದಾಯದ ಜನ ತಮ್ಮ ಮೂಲಸ್ಥಾನಕ್ಕೆ ಹಿಂದಿರುಗಲು ನಮ್ಮ ಸ್ವಾಗತವಿದೆ ಎಂದು ಮುಸ್ಲಿಂ ಸಮುದಾಯದ ವೃದ್ಧರೊಬ್ಬರು ಹೇಳಿದ್ದಾರೆ.
‘ಪಂಡಿತ ಸಮುದಾಯದ ಜನ ಈ ಹಳ್ಳಿಯ ನಿವಾಸಿಗಳು. ನಾವು ಜೊತೆಯಲ್ಲೇ ವಾಸಿಸುತ್ತಿದ್ದೆವು ಮತ್ತು ಜೊತೆಯಲ್ಲೇ ಊಟ ಮಾಡುತ್ತಿದ್ದೆವು. ಪರಿಸ್ಥಿತಿ ಹದಗೆ್ಟ್ಟಿದ್ದರಿಂದ ಅವರು ಹುಟ್ಟೂರು ತೊರೆಬೇಕಾಯ್ತು. ಈಗ ಹಿಂದಿರುಗುವುದಾದರೆ, ಅವರಿಗೆ ಬೇಕಾದ ಎಲ್ಲ ನೆರವು ನೀಡಲು ಸಿದ್ಧ’ಎಂದು ಅವರು ಹೇಳಿದ್ದಾರೆ.
ಕಾಶ್ಮೀರ ಕಣಿವೆಯು ಪಂಡಿತರು ಮತ್ತು ಮುಸ್ಲಿಂ ಎರಡೂ ಸಮುದಾಯಗಳ ಜನ್ಮಭೂಮಿ. ನಾವು ಒಟ್ಟಿಗೆ ಕಳೆದ ಸಮಯವನ್ನು ಹೇಗೆ ಮರೆಯಲು ಸಾಧ್ಯ? ಅವರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿರುವುದು ನಮಗೆ ಸಂತೋಷವಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.