ನವದೆಹಲಿ: ‘ರೂಹ್ ಅಫ್ಜಾ’ ಪಾನೀಯ ತಯಾರಿಕಾ ಕಂಪನಿ ಹಮ್‌ದರ್ದ್ ಅನ್ನು ಗುರಿಯಾಗಿಸಿಕೊಂಡಿರುವ ನಿಂದನಾತ್ಮಕ ವಿಡಿಯೊವನ್ನು ಸಾಮಾಜಿಕ ತಾಲತಾಣಗಳಿಂದ 24 ಗಂಟೆಗಳಲ್ಲಿ ತೆಗೆಯಬೇಕು ಎಂದು ಯೋಗ ಗುರು ಬಾಬಾ ರಾಮದೇವ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ತಾಕೀತು ಮಾಡಿದೆ.
ಈ ಪಾನೀಯವನ್ನು ಉದ್ದೇಶಿಸಿ ರಾಮದೇವ ಅವರು ‘ಶರಬತ್ ಜಿಹಾದ್’ ಎನ್ನುವ ಮಾತು ಆಡಿರುವುದು ವಿವಾದಕ್ಕೆ ಗುರಿಯಾಗಿದೆ. ಈ ಮಾತು ನ್ಯಾಯಾಂಗ ನಿಂದನೆಯೂ ಹೌದು ಎಂದು ಆರೋಪಿಸಲಾಗಿದೆ.
ಹಮ್‌ದರ್ದ್ ಸೇರಿದಂತೆ ಎದುರಾಳಿ ಕಂಪನಿಗಳ ಉತ್ಪನ್ನಗಳ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು, ವಿಡಿಯೊಗಳನ್ನು ಹಂಚಿಕೊಳ್ಳಬಾರದು ಎಂದು ರಾಮದೇವ ಅವರಿಗೆ ಕೋರ್ಟ್ ಈ ಹಿಂದೆಯೇ ಸೂಚನೆ ನೀಡಿತ್ತು. ಆದರೆ, ರಾಮದೇವ ಅವರು ಅಪಮಾನಕಾರಿ ಆಗಿರುವ ವಿಡಿಯೊ ಒಂದನ್ನು ಮತ್ತೆ ಹಂಚಿಕೊಂಡಿದ್ದಾರೆ ಎಂದು ಹಮ್‌ದರ್ದ್ ಪರ ವಕೀಲರು ನ್ಯಾಯಾಲಯಕ್ಕೆ ಗುರುವಾರ ತಿಳಿಸಿದರು.
ಇದನ್ನು ಆಲಿಸಿದ ನ್ಯಾಯಾಲಯವು, ಹಮ್‌ದರ್ದ್ ಉತ್ಪನ್ನಗಳ ಬಗ್ಗೆ ಉಲ್ಲೇಖವಿರುವ ವಿಡಿಯೊವನ್ನು 24 ಗಂಟೆಗಳಲ್ಲಿ ತೆಗೆದುಹಾಕಬೇಕು ಎಂದು ರಾಮದೇವ ಅವರಿಗೆ ತಾಕೀತು ಮಾಡಿತು.
‘ಹಿಂದಿನ ಆದೇಶದ ಹಿನ್ನೆಲೆಯಲ್ಲಿ ಗಮನಿಸಿದಾಗ, ನೀವು ಸಲ್ಲಿಸಿರುವ ಪ್ರಮಾಣಪತ್ರ ಹಾಗೂ ವಿಡಿಯೊ ನ್ಯಾಯಾಂಗ ನಿಂದನೆಯಂತೆ ಇದೆ ಎಂಬುದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ನಾನು ಈಗ ನ್ಯಾಯಾಂಗ ನಿಂದನೆ ನೋಟಿಸ್ ಹೊರಡಿಸಲಿದ್ದೇನೆ. ನಾವು ಅವರನ್ನು ಇಲ್ಲಿಗೆ ಬರಹೇಳಲಿದ್ದೇವೆ’ ಎಂದು ನ್ಯಾಯಮೂರ್ತಿ ಅಮಿತ್ ಬನ್ಸಲ್ ಹೇಳಿದರು.
ವಿವಾದಾತ್ಮಕ ಹೇಳಿಕೆಯ ಕಾರಣಕ್ಕಾಗಿ ಹಮ್‌ದರ್ದ್ ನ್ಯಾಷನಲ್ ಫೌಂಡೇಷನ್ ಇಂಡಿಯಾ ಸಂಸ್ಥೆಯು ರಾಮದೇವ ಮತ್ತು ಅವರ ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯ ವಿರುದ್ಧ ಅರ್ಜಿ ಸಲ್ಲಿಸಿದೆ.
ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ ನಂತರ, ಆಕ್ಷೇಪಾರ್ಹವಾದ ವಿಷಯಗಳನ್ನು ವಿಡಿಯೊದಿಂದ 24 ತಾಸುಗಳಲ್ಲಿ ಅಳಿಸಲಾಗುತ್ತದೆ ಎಂದು ರಾಮದೇವ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ತನ್ನ ಆದೇಶವನ್ನು ಪಾಲಿಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ರಾಮದೇವ ಅವರಿಗೆ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ಹಮ್‌ದರ್ದ್ ಕಂಪನಿಯ ಪರವಾಗಿ ವಾದಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ‘ರಾಮದೇವ ಅವರ ವಿಡಿಯೊ ಕೋಮು ಭಾಷಣದ ರೀತಿಯಲ್ಲಿ ಇದೆ. ಅವರು ಇತರರ ಉತ್ಪನ್ನಗಳ ಬದಲು ತಮ್ಮ ಉತ್ಪನ್ನ ಬಳಸುವಂತೆ ಗ್ರಾಹಕರಿಗೆ ಹೇಳಿ, ಅವರ ನಡುವೆ ಕೋಮು ಆಧಾರದಲ್ಲಿ ವಿಭಜನೆ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.
ವಿಡಿಯೊ ಅಭಿರುಚಿ ಸರಿಯಿಲ್ಲದಿರಬಹುದು, ಅದು ಮಾನಹಾನಿಕರವೂ ಆಗಿರಬಹುದು. ಆದರೆ ಅದು ಇತರ ಕಂಪನಿಗಳ ಉತ್ಪನ್ನಗಳ ಬಗ್ಗೆ ಅಗೌರವ ತೋರುವಂತೆ ಇಲ್ಲ ಎಂದು ರಾಮದೇವ ಮತ್ತು ಪತಂಜಲಿ ಪರ ವಕೀಲರು ಹೇಳಿದರು.
ಹಮ್‌ದರ್ದ್ ಕಂಪನಿಯ ‘ರೂಹ್ ಅಫ್ಜಾ’ ಪಾನೀಯದ ಬಗ್ಗೆ ರಾಮದೇವ ಅವರು ‘ಶರಬತ್ ಜಿಹಾದ್’ ಎಂದು ಹೇಳಿದ್ದು ತನ್ನ ಆತ್ಮಸಾಕ್ಷಿಯನ್ನು ಕಲಕಿದೆ ಎಂದು ನ್ಯಾಯಾಲಯ ಏಪ್ರಿಲ್ 22ರಂದು ಹೇಳಿತ್ತು. ಈ ಹೇಳಿಕೆಗೆ ಸಮರ್ಥನೆ ಇಲ್ಲ ಎಂದೂ ಅದು ಹೇಳಿತ್ತು. ಆಗ ರಾಮದೇವ ಅವರು, ಸಂಬಂಧಪಟ್ಟ ವಿಡಿಯೊಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳನ್ನು ತಕ್ಷಣವೇ ಅಳಿಸಿಹಾಕುವುದಾಗಿ ಭರವಸೆ ನೀಡಿದ್ದರು.
ಪತಂಜಲಿ ಕಂಪನಿಯ ‘ಗುಲಾಬ್ ಶರಬತ್’ ಬಗ್ಗೆ ಪ್ರಚಾರ ಮಾಡುವ ಸಂದರ್ಭದಲ್ಲಿ ರಾಮದೇವ ಅವರು, ಹಮ್‌ದರ್ದ್‌ನ ‘ರೂಹ್ ಅಫ್ಜಾ’ ಪಾನೀಯದಿಂದ ಸಿಗುವ ಹಣದಿಂದ ಮದರಸಾಗಳನ್ನು, ಮಸೀದಿಗಳನ್ನು ನಿರ್ಮಿಸಲಾಗುತ್ತದೆ ಎಂಬುದಾಗಿ ಆರೋಪಿಸಿದ್ದರು ಎಂದು ಹಮ್‌ದರ್ದ್ ಪರ ವಕೀಲರು ಹೇಳಿದ್ದರು.
ಅವರು (ರಾಮದೇವ) ನಮ್ಮ ನಿಯಂತ್ರಣದ ಆಚೆಗೆ ಇದ್ದಾರೆ. ಅವರು ಯಾರ ನಿಯಂತ್ರಣದಲ್ಲಿಯೂ ಇಲ್ಲ. ಅವರು ತಮ್ಮದೇ ಆದ ಜಗತ್ತಿನಲ್ಲಿ ಇದ್ದಾರೆಅಮಿತ್ ಬನ್ಸಲ್ ನ್ಯಾಯಮೂರ್ತಿ ದೆಹಲಿ ಹೈಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.