ADVERTISEMENT

Online gaming ನಿಷೇಧಿಸುವ ಬದಲು ತೆರಿಗೆ ವಿಧಿಸಿ: ಶಶಿ ತರೂರ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 9:34 IST
Last Updated 20 ಆಗಸ್ಟ್ 2025, 9:34 IST
   

ನವದೆಹಲಿ: ಆನ್‌ಲೈನ್ ಹಣ ಆಧಾರಿತ ಗೇಮಿಂಗ್ ಅನ್ನು ನಿಷೇಧಿಸುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಟೀಕಿಸಿದ್ದಾರೆ. ಅಂತಹ ಕ್ರಮವು ಉದ್ಯಮವನ್ನು ಭೂಗತಗೊಳಿಸುತ್ತದೆ ಮತ್ತು ಕ್ರಿಮಿನಲ್ ಜಾಲಗಳನ್ನು ಬಲಪಡಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಲೋಕಸಭೆಯಲ್ಲಿ ಮಂಡಿಸಲಾದ ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸುವ ಮತ್ತು ನಿಯಂತ್ರಿಸುವ ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸುವ ಮೂಲಕ ನಾವು ಅದನ್ನು ಭೂಗತಗೊಳಿಸುತ್ತಿದ್ದೇವೆ. ಅದನ್ನು ಕಾನೂನುಬದ್ಧಗೊಳಿಸಿದರೆ, ನಿಯಂತ್ರಿಸಿದರೆ ಮತ್ತು ತೆರಿಗೆ ವಿಧಿಸಿದರೆ ಅದು ಸರ್ಕಾರಕ್ಕೆ ಉಪಯುಕ್ತ ಆದಾಯದ ಮೂಲವಾಗಬಹುದು ಎಂಬ ವಾದದ ಕುರಿತು ನಾನು ಬಹಳ ದೀರ್ಘ ಲೇಖನವನ್ನು ಬರೆದಿದ್ದೇನೆ ಎಂದು ಹೇಳಿದ್ದಾರೆ.

ಅನೇಕ ದೇಶಗಳು ಈ ಬಗ್ಗೆ ವಿವರವಾಗಿ ಅಧ್ಯಯನ ಮಾಡಿದ್ದು, ನಿಯಂತ್ರಣ ಮತ್ತು ತೆರಿಗೆ ವಿಧಿಸುವುದರಿಂದ ಸಾಮಾಜಿಕ ಉದ್ದೇಶಗಳಿಗೆ ಹಣ ಸಂಗ್ರಹಿಸಬಹುದು. ಆದರೆ, ನಿಷೇಧವು ಕ್ರಿಮಿನಲ್ ಮಾಫಿಯಾಗಳನ್ನು ಮಾತ್ರ ಶ್ರೀಮಂತಗೊಳಿಸುತ್ತದೆ ಎಂಬ ತೀರ್ಮಾನಕ್ಕೆ ಬಂದಿವೆ ಎಂದಿದ್ದಾರೆ.

ADVERTISEMENT

ಈ ಬಗ್ಗೆ ಎಕ್ಸ್‌ನಲ್ಲೂ ಪೋಸ್ಟ್ ಹಂಚಿಕೊಂಡಿರುವ ಅವರು, ‘2018ರಲ್ಲಿ ಆನ್‌ಲೈನ್ ಗೇಮಿಂಗ್ ಅನ್ನು ಕಾನೂನುಬದ್ಧಗೊಳಿಸಲು, ನಿಯಂತ್ರಿಸಲು ಮತ್ತು ತೆರಿಗೆ ವಿಧಿಸಲು ಸರ್ಕಾರವನ್ನು ಒತ್ತಾಯಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಆದರೆ, ಅದನ್ನು ನಿಷೇಧಿಸಿದರೆ ಭೂಗತಗೊಳ್ಳುತ್ತದೆ ಮತ್ತು ಕೇವಲ ಮಾಫಿಯಾದ ಲಾಭವನ್ನು ಹೆಚ್ಚಿಸುತ್ತದೆ’ಎಂದು ಅವರು ಬರೆದಿದ್ದಾರೆ.

ಈ ಸಮಸ್ಯೆಯನ್ನು ಪರಿಗಣಿಸಿದ ಇತರ ದೇಶಗಳ ಅನುಭವದಿಂದ ಸರ್ಕಾರ ಯಾವುದೇ ಪಾಠಗಳನ್ನು ಕಲಿತಿಲ್ಲ ಎಂಬುದು ವಿಷಾದಕರ ಎಂದೂ ಅವರು ಬರೆದಿದ್ದಾರೆ.

ಮಸೂದೆಯನ್ನು ಕಾನೂನು ಮಾಡುವ ಮೊದಲು ಎಲ್ಲ ಸಾಧಕ-ಬಾಧಕಗಳನ್ನು ಪರಿಗಣಿಸಲು ಕನಿಷ್ಠ ಸಂಸದೀಯ ಸಮಿತಿಗೆ ಶಿಫಾರಸು ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸುವ ಮತ್ತು ನಿಯಂತ್ರಿಸುವ ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.

ಪ್ರಸ್ತಾವಿತ ಮಸೂದೆಯು ಆನ್‌ಲೈನ್ ಹಣದ ಗೇಮಿಂಗ್ ಮತ್ತು ಅದರ ಜಾಹೀರಾತುಗಳನ್ನು ನಿಷೇಧಿಸುತ್ತದೆ. ಉಲ್ಲಂಘಿಸುವವರಿಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅನುವು ಮಾಡಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.