ADVERTISEMENT

ಕಾಂಗ್ರೆಸ್‌ನ ಎಸ್‌ಐಆರ್‌ ಸಭೆಗೆ ಶಶಿ ತರೂರ್ ಗೈರು; ಮೋದಿ ಕಾರ್ಯಕ್ರಮಕ್ಕೆ ಹಾಜರು

ಪಿಟಿಐ
Published 18 ನವೆಂಬರ್ 2025, 16:13 IST
Last Updated 18 ನವೆಂಬರ್ 2025, 16:13 IST
<div class="paragraphs"><p>ಶಶಿ ತರೂರ್</p></div>

ಶಶಿ ತರೂರ್

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಉಪನ್ಯಾಸ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಕಾಂಗ್ರೆಸ್‌ ಸಂಸದ ಶಶಿ ತರೂರ್‌, 12 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಕುರಿತು ಪರಿಶೀಲನೆಗೆ ಕಾಂಗ್ರೆಸ್‌ ಮಂಗಳವಾರ ಕರೆದಿದ್ದ ಸಭೆಗೆ ಗೈರಾಗಿದ್ದಾರೆ.

ತರೂರ್‌ ಅವರ ಈ ನಡೆಯಿಂದ ಕಾಂಗ್ರೆಸ್‌ ಪಕ್ಷ ಮುಜುಗರ ಅನುಭವಿಸಿದೆ. ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಪಕ್ಷ ಮುಂದಾಗಿಲ್ಲ. ಆದರೆ, ಅವರ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದೆ.

ADVERTISEMENT

ರಾಮನಾಥ ಗೋಯೆಂಕಾ ಉಪನ್ಯಾಸ ಮಾಲಿಕೆಯಲ್ಲಿ ಪ್ರಧಾನಿ ಮೋದಿ ಅವರು ಉಪನ್ಯಾಸ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ತರೂರ್‌ ಸಹ ಪಾಲ್ಗೊಂಡಿದ್ದರು. ಬಳಿಕ, ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ನೆಗಡಿ ಹಾಗೂ ಕೆಮ್ಮುನಿಂದ ಬಳಲುತ್ತಿದ್ದರೂ ಮೋದಿ ಅವರ ಉಪನ್ಯಾಸ ಕಾರ್ಯಕ್ರಮಕ್ಕೆ ನಾನು ಹಾಜರಾಗಿದ್ದೆ’ ಎಂದು ಹೇಳಿದ್ದಾರೆ.

ತವರು ರಾಜ್ಯ ಕೇರಳ ಸೇರಿ 12 ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಕುರಿತು ಚರ್ಚಿಸಲು ಕಾಂಗ್ರೆಸ್‌ ಕರೆದಿದ್ದ ಸಭೆಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ) ಸದಸ್ಯರೂ ಆಗಿರುವ ಶಶಿ ತರೂರ್‌ ಗೈರು ಹಾಜರಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಮೋದಿ ಭಾಷಣ–ತರೂರ್ ಹೇಳಿದ್ದೇನು?: ಪ್ರಧಾನಿ ಮೋದಿ ಅವರ ಮಾತುಗಳ ಸಾರಾಂಶವನ್ನು ತರೂರ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಂತಸವಾಗಿದೆ ಎಂದು ಹೇಳಿದ್ದಾರೆ.

ಇದೇ ತಿಂಗಳು, ಕಾಂಗ್ರೆಸ್ ಪಕ್ಷದಲ್ಲಿರುವ ಕುಟುಂಬ ರಾಜಕಾರಣ ಕುರಿತು ಪ್ರಶ್ನೆ ಎತ್ತಿದ್ದ ತರೂರ್, ಎಲ್‌.ಕೆ.ಅಡ್ವಾಣಿ ಅವರು ರಥಯಾತ್ರೆಯನ್ನು ನಿರ್ದಿಷ್ಟ ಅವಧಿಗೆ ಮುನ್ನಡೆಸಲು ನಿರ್ಧರಿಸಿದ್ದರನ್ನು ಸಮರ್ಥಿಸಿಕೊಂಡಿದ್ದರು. 

ಅಂತರ ಕಾಯ್ದುಕೊಂಡ ‘ಕೈ’: ತರೂರ್‌ ಅವರ ಈ ಹೇಳಿಕೆಗಳ ಕುರಿತು ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್‌, ‘ಯಾವಾಗಲೂ ಅವರು ತಮ್ಮ ಬಗ್ಗೆಯೇ ಮಾತನಾಡುತ್ತಾರೆ’ ಎಂದಿದೆ. ಅಲ್ಲದೇ, ಅಡ್ವಾಣಿ ಬಗೆಗಿನ ಹೇಳಿಕೆ ಕುರಿತಂತೆಯೂ ಪಕ್ಷ ಅಂತರ ಕಾಯ್ದುಕೊಂಡಿದೆ.

ಕ್ರಮಕ್ಕೆ ಮುಂದಾಗದ ‘ಕೈ’:

ತರೂರ್‌ ಅವರ ಹೇಳಿಕೆಗಳು ಸಾಕಷ್ಟು ವಿವಾದಕ್ಕೀಡಾಗುತ್ತಿದ್ದು ಪಕ್ಷಕ್ಕೆ ಮುಜುಗರವನ್ನೂ ಉಂಟು ಮಾಡುತ್ತಿವೆ. ಇಷ್ಟಾದರೂ ಅವರ ವಿರುದ್ಧ ಕಾಂಗ್ರೆಸ್‌ ಪಕ್ಷ ಶಿಸ್ತುಕ್ರಮಕ್ಕೆ ಮುಂದಾಗುತ್ತಿಲ್ಲ. ಕೇರಳದಲ್ಲಿ ತರೂರ್‌ ಜನಪ್ರಿಯ ನಾಯಕ. ಸದ್ಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರ ನಡೆಯುತ್ತಿದ್ದು ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ತರೂರ್‌ ವಿರುದ್ಧ ಕೈಗೊಳ್ಳುವ ಕ್ರಮವು ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಬಾರದು ಎಂಬುದು ನಾಯಕರ ಲೆಕ್ಕಾಚಾರ. ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದು ತರೂರ್‌ ಅವರ ಅಪೇಕ್ಷೆಯಾಗಿದೆ. ಇದಕ್ಕೆ ಕಾಂಗ್ರೆಸ್‌ ಉತ್ಸಾಹ ತೋರುತ್ತಿಲ್ಲ. ಅಲ್ಲದೇ ಚುನಾವಣೆ ಹತ್ತಿರವಾಗುತ್ತಿರುವಾಗ ಅವರು ನೀಡುತ್ತಿರುವ ಹೇಳಿಕೆಗಳು ಅವರು ಬಿಜೆಪಿಗೆ ಹತ್ತಿರವಾಗುತ್ತಿರುವುದನ್ನು ತೋರಿಸುತ್ತಿದೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.